ನವದೆಹಲಿ: ಸಂಸತ್ತಿನಲ್ಲಿ ಹೊಗೆ ಬಾಂಬ್ ಸಿಡಿಸಿ ದಾಳಿ ನಡೆಸಿದ ಪ್ರಕರಣಕ್ಕೆ (Parliament Security Breach Probe) ಸಂಬಂಧಿಸಿದಂತೆ ಬಂಧಿಯಾಗಿರುವ 6 ಜನರ ಪೈಕಿ ಐವರನ್ನು ಮಂಪರು ಪರೀಕ್ಷೆ (Polygraph, Narco Tests)ಗೆ ಒಳಪಡಿಸಲಾಗಿದೆ.
ಮೈಸೂರಿನ ಡಿ. ಮನೋರಂಜನ್(Manoranjan), ಸೇರಿದಂತೆ ನಾಲ್ವರು ಆರೋಪಿಗಳಾದ ಸಾಗರ್ ಶರ್ಮಾ, ಅಮೋಲ್ ಶಿಂಧೆ, ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಅವರಿಗೆ ಗುಜರಾತ್ ಗಾಂಧಿನಗರದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿದೆ. ಮಹಿಳಾ ಆರೋಪಿಯಾಗಿರುವ ನೀಲಂ ಮಂಪರು ಪರೀಕ್ಷೆಗೆ ತನ್ನ ಒಪ್ಪಿಗೆ ನೀಡದ್ದರಿಂದ ಐವರಿಗೆ ಮಾತ್ರ ಪರೀಕ್ಷೆ ನಡೆಸಲು ದೆಹಲಿ ನ್ಯಾಯಾಲಯ ಆದೇಶ ನೀಡಿತ್ತು.
ಸಂಸತ್ ಮೇಲೆ ದಾಳಿ ನಡೆಸಲು ವರ್ಷದ ಹಿಂದೆಯೇ ಮಾಸ್ಟರ್ ಸಂಚು ರೂಪಿತವಾಗಿತ್ತು ಎನ್ನಲಾಗಿದ್ದು, ಸರ್ಕಾರದ ವಿರುದ್ಧ ಏನಾದರೂ ದೊಡ್ಡದು ಮಾಡಿ ಎಲ್ಲರ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ಮೈಸೂರಿನಲ್ಲಿಯೇ ಮನೋರಂಜನ್ ಯೋಜನೆ ರೂಪಿಸಿದ್ದ ಎನ್ನಲಾಗಿದೆ.








