ಭಾರತೀಯ ಮಹಿಳಾ ಕ್ರಿಕೆಟ್‌ನ ಸ್ಟಾರ್ ಓಪನರ್ ಹಾಗೂ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿರುವ ಸುದ್ದಿ ಹೊರಬಿದ್ದಿದ್ದು, ಕ್ರಿಕೆಟ್ ಲೋಕದಲ್ಲಿ ಭಾರಿ ಕುತೂಹಲ ಮೂಡಿದೆ.
ಹೊರ ಜಗತ್ತಿಗೆ ಹೆಚ್ಚು ಸುದ್ದಿ ಮಾಡದೆ, ಬಹುಕಾಲದ ಗೆಳೆಯ ಪಲಾಶ್ ಮುಚ್ಚಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಮಂಧಾನ ಸ್ವತಃ ಅವರೇ ಹೇಳಿದ್ದಾರೆ. ಯಾವುದೇ ಅಧಿಕೃತ ಘೋಷಣೆ ಮಾಡದೆ, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಒಂದು ವಿಶೇಷ ರೀಲ್ ಮುಖಾಂತರ ಈ ಸುಳಿವು ನೀಡಿದ್ದಾರೆ.
ನಿಶ್ಚಿತಾರ್ಥದ ಸುಳಿವು ನೀಡಿದ ರೀಲ್
ಸ್ಮೃತಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ರೀಲ್ ಅಪ್‌ಲೋಡ್ ಮಾಡಿದ್ದು, ಅದರಲ್ಲಿ ಅವರು ತಮ್ಮ ಸಹ ಆಟಗಾರ್ತಿಯರಾದ ರಿಚಾ ಘೋಷ್, ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್ ಮತ್ತು ರಾಧಾ ಯಾದವ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ರೀಲ್‌ನಲ್ಲಿ ಮಂಧಾನ ಕೈಯಲ್ಲಿ ನಿಶ್ಚಿತಾರ್ಥ ರಿಂಗ್‌ನ ಕೆಲವು ಫ್ರೇಮ್‌ಗಳು ಕಾಣಿಸಿಕೊಂಡಿದ್ದು, ಇದು ಅಭಿಮಾನಿಗಳ ಗಮನ ಸೆಳೆದಿದೆ.
ಸ್ಮೃತಿಯ ಪೋಸ್ಟ್ ಹೊರಬಿದ್ದ ಕೆಲವೇ ಕ್ಷಣಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆ ಸುರಿದಿದೆ.
ಆರ್ಸಿಬಿ ಮತ್ತು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅಭಿಮಾನಿಗಳು ಮಂಧಾನ ಅವರ ಹೊಸ ಜೀವನದ ಆರಂಭಕ್ಕೆ ಶುಭಕೋರಿದ್ದಾರೆ.
ಪಲಾಶ್ ಮುಚ್ಚಲ್ ಬಾಲಿವುಡ್ ಸಂಗೀತ ನಿರ್ದೇಶಕಿ ಪಾಲಕ್ ಮುಚ್ಚಲ್ ಅವರ ತಮ್ಮ. ಅವರು ಕೂಡಾ ಸಂಗೀತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಮೃತಿ–ಪಲಾಶ್ ಸ್ನೇಹ ಹಲವಾರು ವರ್ಷಗಳಿಂದ ಮುಂದುವರಿದಿದ್ದು, ಈಗ ನಿಶ್ಚಿತಾರ್ಥದ ಮೂಲಕ ಹೊಸ ಹಂತಕ್ಕೆ ಕಾಲಿಟ್ಟಿದೆ.
ಸದ್ಯಕ್ಕೆ ಮಂಧಾನ–ಪಲಾಶ್ ಜೋಡಿಯಿಂದ ಅಧಿಕೃತ ಘೋಷಣೆ ಬರಬೇಕಿದೆ. ಆದರೆ ಕ್ರಿಕೆಟ್ ಜಗತ್ತು ಈಗಾಗಲೇ ಸಂಭ್ರಮದಲ್ಲಿದೆ.








