ಬೆಳಗಾವಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದ ಹುಚ್ಚು ಯುವ ಪೀಳಿಗೆಯಲ್ಲಿ ಹೆಚ್ಚಾಗುತ್ತಿದೆ. ಅಂತರ್ಜಾದಲ್ಲಿ ಅತೀ ಹೆಚ್ಚು ಜನಪ್ರಿಯತೆ ಪಡೆಯುವುದಕ್ಕಾಗಿ ಫೇಸ್ಬುಕ್ (Facebook) ಮತ್ತು ಇನ್ಸ್ಟಾಗ್ರಾಮ್ ಬಳಕೆ ಹೆಚ್ಚಾಗುತ್ತಿದೆ. ಕೆಲವೊಂದು ಅನಾವಶ್ಯಕ ಜಗಳಗಳು ವಿಕೋಪಕ್ಕೆ ತಿರುಗುತ್ತಿರುವ ಉದಾಹರಣೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಹೀಗೆ ಕಿತ್ತಾಟವೊಂದು ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.
ಚಾಟಿಂಗ್ ವಿಚಾರದಲ್ಲಿ ಶುರುವಾದ ಜಗಳ ಪ್ರಜ್ವಲ್ ಸುಂಕದ(17) ಎಂಬ ಅಪ್ರಾಪ್ತನ ಕೊಲೆಯಲ್ಲಿ ಅಂತ್ಯವಾಗಿದೆ. ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹುಡುಗಿ ಹೆಸರಿನಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ ಪ್ರಜ್ವಲ್‌ಗೆ ಮೆಸೇಜ್ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಆದರೆ, ಮೆಸೇಜ್ ಮಾಡುತ್ತಿರುವುದು ಹುಡುಗ ಎಂದು ಗೊತ್ತಾಗುತ್ತಿದ್ದಂತೆಯೇ ಮೆಸೇಜ್ನಲ್ಲಿ ಅವಾಚ್ಯವಾಗಿ ಬೈದಿದ್ದಾನೆ. ಹೀಗಾಗಿ ಸಿಟ್ಟಾದ ವ್ಯಕ್ತಿ, ಗ್ಯಾಂಗ್ ಕಟ್ಟಿಕೊಂಡು ಬಂದು ಪ್ರಜ್ವಲ್ ಜತೆಗೆ ಜಗಳ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ಅಂತಿಮವಾಗಿ ಪ್ರಜ್ವಲ್ನನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಪ್ರಜ್ವಲ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








