ಮಣ್ಣಿನ ಪರಿಸರ ವ್ಯವಸ್ಥೆ ಎಂಜಿನಿಯರ್‌ಗಳು, ಪರಿಸರ ಮತ್ತ ರೈತ ಮಿತ್ರ ಜೀವಿಗಳು ಇರುವೆಗಳು – ಎರೆಹುಳುಗಳು – ಸಗಣಿ ಜೀರುಂಡೆಗಳು:
ನಮ್ಮ ಪರಿಸರ ವ್ಯವಸ್ಥೆ ಅದೆಷ್ಟು ವ್ಯವಸ್ಥಿತವೆಂದರೆ, ಇಲ್ಲಿ ಪ್ರತೀ ಜೀವಿಗಳಿಗೂ ಪರಿಸರ ಸಮತೋಲನ ಮತ್ತು ಪರಿಸರದ ಕಟ್ಟುವಕೆಯಲ್ಲಿ ತಮ್ಮದೇ ಆದ ಕರ್ತವ್ಯಗಳಿವೆ. ಈ ಜೀವಿಗಳು ತಮ್ಮ ಪಾಲಿನ ಜಾಯಕವನ್ನು ನಿಸ್ವಾರ್ಥವಾಗಿ ಮಾಡುತ್ತಲೇ ಇವೆ. ಪರಿಸರವನ್ನು ನಾಶ ಮಾಡುವ ಏಕೈಕ ಜೀವಿ ಮಾನವ ಮಾತ್ರ.
ಪರಿಸರ ವ್ಯವಸ್ಥೆಯ ಎಂಜಿನಿಯರ್‌ಗಳು ಎಂದೇ ಕರೆಸಿಕೊಂಡ ಕೆಲವು ಜೀವಿಗಳು ಈ ಸೃಷ್ಟಿಯಲ್ಲಿವೆ. ತಮ್ಮ ಭೌತಿಕ ಪರಿಸರದಲ್ಲಿ ಪ್ರಮುಖ ಬದಲಾವಣೆಗಳನ್ನು ಇವು ಮಾಡುತ್ತವೆ. ಇವುಗಳ ದಿನನಿತ್ಯದ ಕಾರ್ಯಚಟುವಟಿಕೆಗಳು ನಮ್ಮ ಪರಿಸರ ವ್ಯವಸ್ಥೆಯಲ್ಲಿನ ಇತರ ಅನೇಕ ಜೀವಿಗಳ ಆವಾಸಸ್ಥಾನಗಳ ಮೇಲೆ ಪ್ರಭಾವ ಬೀರುತ್ತದೆ. ಈ ಜೀವಿಗಳನ್ನೇ ಪರಿಸರ ವ್ಯವಸ್ಥೆಯ ಎಂಜಿನಿಯರ್‌ಗಳು ಎಂದು ಕರೆಯುವುದಕ್ಕೆ ಕಾರಣಗಳಿವೆ. ಈ ಜೀವ ಪ್ರಭೇದಗಳು ಕಟ್ಟುವಿಕೆಯನ್ನೇ ಕಸುಬಾಗಿಸಿಕೊಂಡ ಸೂಕ್ಷ್ಮ ಜೀವಿಗಳು. ಇವುಗಳಲ್ಲಿ ಕೆಲವು ಜೀವಿಗಳು ಮರುಭೂಮಿಯ ಮರಳು ಮಿಶ್ರಿತ ಮಣ್ಣಿನಲ್ಲಿಯೂ ಸಹ ವಿರಳವಾದ ನೀರಿನ ಸರಬರಾಜನ್ನು ಪ್ರಾದೇಶಿಕವಾಗಿ ಕೇಂದ್ರೀಕರಿಸುವ ಒಂದು ಅಗ್ರಾಹ್ಯ ಮೇಲ್ಮೈ ಹೊರಪದರವನ್ನು ಸೃಷ್ಟಿಸುತ್ತವೆ.
ಪರಿಸರವೆಂಬ ಅನೂಹ್ಯ ಲೋಕದ ಸೃಜನಶೀಲ ಕಾರ್ಯಶೀಲ ಎಂಜಿನಿಯರ್ ಗಳಲ್ಲಿ ಬಿಲ ಪ್ರಾಣಿಗಳೂ ಸೇರಿವೆ. ಇವು ಮಣ್ಣಿನಲ್ಲಿ ಗಾಳಿ ಮತ್ತು ನೀರಿನ ಚಲನೆಯನ್ನು ಸರಾಗಗೊಳಿಸುವ ಮೂಲಕ ಇತರ ಜೀವಿಗಳಿಗೆ ಬದುಕುವ ಅವಕಾಶಗಳನ್ನು ಒದಗಿಸಿಕೊಡುತ್ತವೆ. ಮಣ್ಣಿನಾಳದಲ್ಲಿ ಬಿಲ ತೋಡಿ ಬದುಕುವ ಕೆಲವು ಸರಿಸೃಪಗಳು ಮತ್ತು ಉರಗಜಾತಿಯ ಜೀವಿಗಳಿಂದ ಪರಿಸರದ ಸಮತೋಲನಕ್ಕೆ ಸಾಕಷ್ಟು ಕೊಡುಗೆಗಳಿವೆ. ಸಮುದ್ರ ತಟದಲ್ಲಿ ಆಮೆ, ಮೊಸಳೆಗಳಂತ ಜಲಚರಗಳು, ಮರಳುಗಾಡಿನಲ್ಲಿ ಮರುಭೂಮಿಯ ಇಲಿ ಹಾಗೂ ಮೃದ್ವಂಗಿಗಳಿ ಬಿಲವಾಸಿ ಜೀವಿಗಳಾಗಿ ತಮ್ಮ ಪಾಲಿನ ಪರಿಸರ ನಿರ್ಮಾಣದ ಕಾಯಕ ಮಾಡುತ್ತವೆ. ಗೋಫರ್ಸ್ ಮತ್ತು ಮೋಲ್ ಎಂಬ ಪ್ರಭೇದದ ಇಲಿಗಳ ಅತ್ಯದ್ಭುತ ಕಾರ್ಯಾಚರಣೆಯಿಂದ ಮಣ್ಣಿನ ಹದ ಹೆಚ್ಚಾಗುತ್ತದೆ. ಇವು ಬಿಲ ತೋಡುವ ಜೊತೆಗೆ ಮಣ್ಣಿನ ಕುಂಬಾರಿಕೆಯನ್ನೂ ಮಾಡುತ್ತವೆ. ಇದೇ ತರಹ ದೊಡ್ಡ ಜೀವಿಗಳಾದ ಬಿಲವಾಸಿಗಳೂ ಆದ ಚಿಪ್ಪು ಹಂದಿ ಅಥವಾ ಪ್ಯಾಂಗೋಲಿನ್, ಮುಳ್ಳು ಹಂದಿಗಳಿಂದ ಮಣ್ಣನ ಸಾರವರ್ಧನೆಗೆ ಆಗುವ ಉಪಕಾರ ಅಷ್ಟಿಷ್ಟಲ್ಲ.
ಗೆದ್ದಲುಗಳು, ಎರೆಹುಳುಗಳು ಮತ್ತು ಇರುವೆಗಳು ಪ್ರಕೃತಿ ಸೃಷ್ಟಿಸಿಕೊಂಡಿರುವ ಅತ್ಯುತ್ತಮ ಎಂಜಿನಿಯರ್ ಗಳು. ಇವು ಮಣ್ಣಿನ ಸಾಂದ್ರತೆಯನ್ನು ಸಾರವನ್ನು ಮತ್ತು ಸಾವಯವತೆಯನ್ನು ಹೆಚ್ಚಿಸುತ್ತವೆ. ಗೆದ್ದಲು ಕಟ್ಟುವ ಹುತ್ತ ಅದ್ಭುತವಾದ ಸಾರಯುಕ್ತ ಮಣ್ಣು. ಹಾಗೆಯೇ ಇರುವೆಗಳೂ ಸಹ ತಮ್ಮ ಗೂಡು ನಿರ್ಮಿಸುವೆಡೆಯಲ್ಲಿ ಮಣ್ಣಿನ ಕಣಗಳನ್ನು ನವಿರಾಗಿಸುತ್ತವೆ. ಎರೆಹುಳುಗಳಂತೂ ಅಕ್ಷರಶಃ ಮಣ್ಣಿನ್ನು ತಿನ್ನುತ್ತವೆ ಮತ್ತು ಇವು ವಿಸರ್ಜಿಸುವ ಮಣ್ಣು ಅದ್ಭುತವಾದ ಸಾರ ಹೊಂದಿರುವ ಪ್ರಾಕೃತಿಕ ಗೊಬ್ಬರ. ಹಾಗಾಗೇ ಎರಹುಳುವನ್ನು ರೈತನ ಮಿತ್ರ ಎಂದು ಕರೆಯಲಾಗುತ್ತದೆ. ಇವು ಸಸ್ಯದ ಅವಶೇಷಗಳನ್ನು ಮಣ್ಣಿನೊಳಕ್ಕೆ ಹಾಯಿಸುತ್ತವೆ. ತಮ್ಮ ದೇಹದಿಂದ ಖನಿಜ ಮಣ್ಣಿನ ಕಣಗಳೊಂದಿಗೆ ಹಾದುಹೋಗುವ ಮೂಲಕ ಫಲವತ್ತಾದ ಮಣ್ಣನ್ನು ಸಂಯೋಜಿಸುತ್ತವೆ.
ಪರಿಸರ ವ್ಯವಸ್ಥೆಯ ಇನ್ನೊಂದು ವರ್ಗದ ಎಂಜಿನಿಯರ್ ಜೀವಿಗಳೆಂದರೇ ಸಗಣಿ ಜೀರುಂಡೆಗಳು. ಈ ಸಗಣಿ ಜೀರುಂಡೆಗಳು ಪ್ರಾಣಿಗಳ ಸಗಣಿಗಳನ್ನು ಸಣ್ಣ ಸುರಂಗಗಳಲ್ಲಿ ಹೂತುಹಾಕುವ ಮೂಲಕ ಪೋಷಕಾಂಶಗಳ ವೃದ್ಧಿಗೊಳಿಸುತ್ತವೆ. ಇವು ಅನೇಕ ದೊಡ್ಡ ಸಸ್ತನಿಗಳ ವಿಸರ್ಜಿತ ಮಲದ ತುಂಡುಗಳನ್ನು ಕತ್ತರಿಸಿ, ಆ ಸಗಣಿ ಚೆಂಡುಗಳನ್ನು ಹೊಸ ಸ್ಥಳಕ್ಕೆ ಸುತ್ತಲು ಅನುವು ಮಾಡಿಕೊಡುತ್ತದೆ. ಹೆಣ್ಣು ಸಗಣಿ ಜೀರುಂಡೆಯು ತನ್ನ ಮೊಟ್ಟೆಗಳನ್ನು ಸಗಣಿ ಚೆಂಡಿನಲ್ಲಿ ಇರಿಸಿ ಮಣ್ಣಿನಲ್ಲಿ ಹೂತುಹಾಕುತ್ತದೆ. ಸಗಣಿ ಹರಡುವುದು ಮತ್ತು ಹೂಳುವುದು ಜೀರುಂಡೆ ಲಾರ್ವಾಗಳಿಗೆ ಆಹಾರ ಮೂಲವನ್ನು ಒದಗಿಸುವುದಲ್ಲದೆ, ಗೊಬ್ಬರದಲ್ಲಿರುವ ಪೋಷಕಾಂಶಗಳ ಹರಿವನ್ನು ಸುಲಭವಾಗಿ ರಕ್ಷಿಸುತ್ತದೆ. ಈ ಜೀರುಂಡೆಗಳು ಸಗಣಿ ತುಏಉಗಳನ್ನು ತ್ವರಿತವಾಗಿ ಹೂತುಹಾಕುವುದರಿಂದ ಮಾಂಸಾಹಾರಿ ನೊಣಗಳು ಮತ್ತು ಹಾನಿಕಾರಕ ಕ್ರಿಮಿ ಕೀಟಗಳ ಸಂತಾನೋತ್ಪತ್ತಿಯನ್ನು ತಡೆಯುತ್ತದೆ. ಪರಿಸರ ವ್ಯವಸ್ಥೆಯಲ್ಲಿ ಫಲವತ್ತಾದ ಮಣ್ಣಿನ ಕೊರತೆಯಿದ್ದರೆ, ಈ ಸೂಕ್ತ ಜಾತಿಯ ಸಗಣಿ ಜೀರುಂಡೆಗಳನ್ನು ಅಥವಾ ಎರೆಹುಳುಗಳನ್ನು ಪರಿಚಯಿಸುವುದು ಅತ್ಯಂತ ಲಾಭಕರ.
ಮೊದಲಿಗೆ, ಮಣ್ಣಲ್ಲಿ ನೀರು ಇಂಗುವಂತಹ ಸಣ್ಣ ಸುರಂಗಗಳ ನಿರ್ಮಾಣವಾಗಬೇಕು. ಇದು ಸಾಧ್ಯವಾಗುವುದು ಮಣ್ಣೊಳಗೆಯೇ ಸಂಚರಿಸುವ ಜೀವಾಣುಗಳಿಂದ. ಈ ಮಣ್ಣುಜೀವಿಗಳಿಗೆ ಸಾವಯವ ವಸ್ತುಗಳೇ ಮೂಲಾಹಾರ. ಮಣ್ಣಿಗೆ ಸಾವಯವ ಅಂಶ ಬೆರೆಸಿದಾಗ, ಅದನ್ನು ಆಹಾರವಾಗಿ ಸೇವಿಸುವ ಜೀವಿಗಳು ಓಡಾಡಿದಾಗ, ಸುರಂಗಗಳು ಸೃಷ್ಟಿಯಾಗುತ್ತವೆ. ಇವುಗಳಲ್ಲಿ ಗಾಳಿಯಾಡುತ್ತದೆ – ನೀರು ಹರಿಯುತ್ತದೆ. ಹೀಗಾದಾಗ ಸಹಜವಾಗಿ ಸರಳವಾಗಿ ಮತ್ತು ಸುಲಭವಾಗಿ ಆ ಪ್ರದೇಶದ ಮಣ್ಣು ಸಾವಯವಯುಕ್ತವಾಗುತ್ತದೆ ಮತ್ತು ಸಾರಯುಕ್ತವಾಗುತ್ತದೆ.
ಫಲವತ್ತಾದ /ಆರೋಗ್ಯಯುತ ಮತ್ತು ಉತ್ಪಾದನಾ ತಾಕತ್ತು ಹೊಂದಿರುವ ಮಣ್ಣುಗಳ ಬಣ್ಣ ದಟ್ಟವಾಗಿರುತ್ತದೆ. ಈ ಮಣ್ಣನ್ನ ಮೇಲಿಂದ ಕೆಳಗೆ ನೆಲಕ್ಕೆ ಹಾಕಿದಾಗ, ಧೂಳಾಗಿ ಬೀಳದೆ ಉದುರು ಉದುರಾಗಿ ಗುಪ್ಪೆ ಗುಪ್ಪೆಯಾಗಿ ಬೀಳುತ್ತದೆ. ಇದನ್ನು ಕೈಯಲ್ಲಿರಿಸಿದಾಗ ತಂಪಾಗಿರುತ್ತದೆ. ಈ ಮಣ್ಣಲ್ಲಿ, ಸಾವಯವ ವಸ್ತುಗಳಾದ ಕಸ – ಕಡ್ಡಿಗಳು ಸಣ್ಣಪ್ರಮಾಣದಲ್ಲಿ ಕಾಣಿಸುತ್ತವೆ. ಇವು ಒಂದು ತರಹದ ಕರ್ಪೂರದ ವಾಸನೆ ಹೊಂದಿರುತ್ತದೆ. ಈ ಮಣ್ಣನ್ನು ಆಳವಾಗಿ ಅಥವಾ ಸೂಕ್ಷ್ಮವಾಗಿ ಗಮನಿಸಿದಾಗ, ಒಂದೆರಡು ಬಗೆಯ ಜೀವಾಣುಗಳು ಸಹ ಕಾಣಿಸುತ್ತವೆ. ಇಂತಹ ಮಣ್ಣುಗಳಲ್ಲಿ ಮಳೆನೀರು ಹಿಡಿದಿಡುವ ಸಾಮರ್ಥ್ಯ ಇರುತ್ತದೆ. ಈ ತರಹದ ಫಲವತ್ತಾದ ಮಣ್ಣು ಕೇವಲ ನೈಸರ್ಗಿಕ ಕಾರ್ಖಾನೆಯ ಪರಿಸರ ಎಂಜಿನಿಯರ್ ಗಳಿಂದ ಮಾತ್ರ ಸಾಧ್ಯ.
–ದೇವಿಕಾ
ಕೃಷಿಕರು, ಮೈಸೂರು
***
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
— Saaksha TV (@SaakshaTv) January 27, 2021
ರಾಜ್ಯ ಸರ್ಕಾರದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾದ ಬಾಲ ಪ್ರತಿಭೆ ಆಶ್ರಯ ಪಿhttps://t.co/COtsY4G6S3
— Saaksha TV (@SaakshaTv) January 27, 2021