
ಮುಂಬೈ, ಜೂನ್ 1: ಇಳಿವಯಸ್ಸಿನಲ್ಲೂ ಅನಾರೋಗ್ಯ ಪೀಡಿತ ಮಗನ ಸೇವೆ ಮಾಡಿದ ತಾಯಿಯನ್ನು, ಮಗ ಆರೋಗ್ಯ ಸುಧಾರಿಸಿದ ನಂತರ ದೂರದ ಪ್ರದೇಶದಲ್ಲಿ ಬಿಟ್ಟು ಬಂದ ಘಟನೆ ಮುಂಬೈನಲ್ಲಿ ನಡೆದಿದೆ.
ದೆಹಲಿಯ ಮಯೂರ್ ವಿಹಾರದ ನಿವಾಸಿ 70ರ ಹರೆಯದ ಲೀಲಾವತಿ ಕೇದಾರನಾಥ ದುಬೆ, ತನ್ನ ಮಗನ ಅಸೌಖ್ಯದ ಸುದ್ದಿ ಕೇಳಿ, ಅಡೆ ತಡೆಗಳ ನಡುವೆಯೂ ದೂರದ ದೆಹಲಿಯಿಂದ ಧಾವಿಸಿ ಮುಂಬೈಗೆ ಬಂದಳು. ಮುಂಬೈನಲ್ಲಿ ಆಟೋರಿಕ್ಷಾ ಚಾಲಕನಾಗಿರುವ ಆಕೆಯ ಪುತ್ರ ದಿನೇಶ್ ಕುಮಾರ್ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ. ಮಗನ ಸ್ಥಿತಿಗೆ ಮರುಗಿದ ತಾಯಿ ಹೃದಯ ತನ್ನ ಇಳಿವಯಸ್ಸಿನಲ್ಲೂ ಅನಾರೋಗ್ಯ ಪೀಡಿತ ಮಗನ ಸೇವೆಯಲ್ಲಿ ತೊಡಗಿತು. ಆರೋಗ್ಯ ಸುಧಾರಿಸುವವರೆಗೆ ಸುಮ್ಮನಿದ್ದ ಮಗ ಬಳಿಕ ಮನೆ ಬಿಟ್ಟು ಹೋಗುವಂತೆ ತಾಯಿಯನ್ನು ಪೀಡಿಸಿದ. ತನ್ನ ಊಟ ತಿಂಡಿಯ ವೆಚ್ಚವನ್ನು ತಾನೇ ಭರಿಸುತ್ತಾ ಮಗನ ಸೇವೆ ಮಾಡಿದ ಆ ತಾಯಿ ಜೀವವನ್ನು ಮನೆಯಿಂದ ಹೊರಗೆ ಹಾಕಲು ಮಗ ಹುನ್ನಾರ ನಡೆಸಿದ. ಭಾನುವಾರ ಮುಂಬೈನ ಮಾಹಲ್ ಗಾಂವ್ ಗೆ ತಾಯಿಯನ್ನು ಕರೆತಂದ ಆತ, ಆಕೆಯನ್ನು ಅಲ್ಲೇ ಬಿಟ್ಟು ಹಿಂತಿರುಗಿಯೂ ನೋಡದೆ ಪರಾರಿಯಾಗಿದ್ದಾನೆ.
ಅಪರಿಚಿತ ಸ್ಥಳದಲ್ಲಿ, ಕೈಯಲ್ಲಿ ಹಣವೂ ಇಲ್ಲದೇ ಏನೂ ಮಾಡಲು ತೋಚದೆ ಆ ತಾಯಿ ಮಾಹುಲ್ ಗಾಂವ್ನಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ಬಾಂದ್ರಾ ಟರ್ಮಿನಸ್ ರೈಲು ನಿಲ್ದಾಣಕ್ಕೆ ನಡೆದುಕೊಂಡು ಬಂದಿದ್ದಾಳೆ. ಬಾಂದ್ರಾ ರೈಲು ನಿಲ್ದಾಣದಲ್ಲಿ ಒಬ್ಬಾತ ಆಕೆಯ ಸಂಕಷ್ಟ ಅಲಿಸಿ, ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ಆ ವೀಡಿಯೋದಿಂದ ಪಶ್ಚಿಮ ರೈಲ್ವೆ ಅಧಿಕಾರಿಗಳ ಗಮನಕ್ಕೆ ಈ ವಿಷಯ ಬಂದಿದ್ದು, ಬಾಂದ್ರಾ ರೈಲು ನಿಲ್ದಾಣದ ಹೊರಗೆ ಕುಳಿತಿದ್ದ ಆಕೆಗೆ ಸಹಾಯ ಮಾಡಲು ಅಧಿಕಾರಿಗಳ ದಂಡು ಧಾವಿಸಿತು.
ಭಾರತೀಯ ರೈಲ್ವೆ ಸಂಚಾರ ಸೇವೆ (ಐಆರ್ಟಿಎಸ್) ಅಧಿಕಾರಿ ಮತ್ತು ಹಿರಿಯ ವಿಭಾಗೀಯ ರೈಲ್ವೆ ಅಧಿಕಾರಿ ಸುಹಾನಿ ಮಿಶ್ರಾ, ರೈಲ್ವೆ ಭದ್ರತಾ ಪಡೆಯ (ಆರ್ಪಿಎಫ್) ಸಬ್ ಇನ್ಸ್ಪೆಕ್ಟರ್ ಜೀತೇಂದ್ರ ಜಾಟ್ ಮತ್ತಿತರರು ಸಿಬ್ಬಂದಿಗಳೊಂದಿಗೆ ಲೀಲಾವತಿ ಬಳಿ
ಧಾವಿಸಿದರು. ಬಾಂದ್ರಾ ಟರ್ಮಿನಸ್ ನ ವೇಟಿಂಗ್ ರೂಂಗೆ ಕರೆದೊಯ್ದು, ಆಕೆಯ ಕಷ್ಟ ಸುಖ ವಿಚಾರಿಸಿ, ಬಿಸಿಯಾದ ಆಹಾರ, ಕುಡಿಯುವ ನೀರು ಒದಗಿಸಿ ಆರೈಕೆ ಮಾಡಿದರು. ಆಕೆಯ ಹಿನ್ನಲೆ ಕೇಳಿ ತಿಳಿದ ಅಧಿಕಾರಿಗಳು ಆಕೆಯನ್ನು ದೆಹಲಿಯಲ್ಲಿರುವ ಮಗನ ಮನೆಗೆ ಕಳುಹಿಸಲು ನಿರ್ಧರಿಸಿದರು. ಆಕೆಯ ಬಳಿ ಹಣ ಇಲ್ಲದಿರುವುದನ್ನು ತಿಳಿದ ಹಿರಿಯ ವಿಭಾಗೀಯ ರೈಲ್ವೆ ಅಧಿಕಾರಿ ಸುಹಾನಿ ಮಿಶ್ರಾ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಭಾನುವಾರ ಮಧ್ಯರಾತ್ರಿಯ ದೆಹಲಿಗೆ ಹೊರಡುವ ರೈಲಿನ ಎಸಿ ಬೋಗಿಯಲ್ಲಿ ಟಿಕೆಟ್ ಕಾಯ್ದಿರಿಸಿಕೊಟ್ಟರು. ಅಲ್ಲದೆ ಆಕೆ ದೆಹಲಿ ತಲುಪಿದ ಬಳಿಕ ಆಕೆಯೊಂದಿಗೆ ಮನೆಗೆ ತೆರಳಿ ದೆಹಲಿಯಲ್ಲಿರುವ ಮಗನೊಂದಿಗೆ ಮಾತನಾಡುವಂತೆಯೂ ದೆಹಲಿಯ ರೈಲ್ವೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ
ಲೀಲಾವತಿ ಅವರಲ್ಲಿ ನಾವು ಏನಾಯಿತೆಂದು ವಿಚಾರಿಸಿದಾಗ ಅವರು ‘ನಾನು ನನ್ನ ಊಟ, ತಿಂಡಿಯ ಖರ್ಚು ಎಂದು ಮಗನಿಗೆ ಹಣ ಕೊಡುತ್ತಿದ್ದೆ. ಆದರೂ ಆತ ನನಗೆ ಮೂರು ತಿಂಗಳಿನಿಂದ ಕಿರುಕುಳ ಕೊಟ್ಟು ಮನೆಯಿಂದ ಹೊರಹೋಗುವಂತೆ ಹಿಂಸಿಸುತ್ತಿದ್ದ. ಅದೆಲ್ಲವನ್ನೂ ನಾನು ಸಹಿಸಿ ಕೊಂಡೆ. ಆದರೆ ಇಂದು ನನ್ನನ್ನು ಆತ ಮನೆಯಿಂದ ಹೊರಹಾಕಿದ’ ಎಂದು ಕಣ್ಣೀರು ಹಾಕಿದರು ಎಂದು ಹಿರಿಯ ವಿಭಾಗೀಯ ರೈಲ್ವೆ ಅಧಿಕಾರಿ ಸುಹಾನಿ ಮಿಶ್ರಾ ಅವರು ಹೇಳಿದ್ದಾರೆ.
ತನ್ನ ನೆರವಿಗೆ ಬಂದ ರೈಲ್ವೆ ಅಧಿಕಾರಿಗಳನ್ನು ತುಂಬು ಹೃದಯದಿಂದ ಆಶೀರ್ವದಿಸಿರುವ ಆಕೆ ಮಗ ಕೈ ಬಿಟ್ಟರೂ ದೇವರ ರೂಪದಲ್ಲಿ ಬಂದು ಅಧಿಕಾರಿಗಳು ನನ್ನನ್ನು ಕಾಪಾಡಿದರು. ಇವರೇ ಈಗ ನನ್ನ ನಿಜವಾದ ಕುಟುಂಬ ಎಂದು ಸಂತೋಷ ವ್ಯಕ್ತಪಡಿಸಿದಳು.








