ಪರದೆ ಮೇಲೆ ವಿಲನ್, ರಿಯಲ್ ಲೈಫ್ ನಲ್ಲಿ ಹೀರೋ ; ಮತ್ತೆ ಮಾನವೀಯತೆ ಮೆರೆದ ಸೋನುಸೂದ್
ಹೈದರಾಬಾದ್ : ಲಾಕ್ ಡೌನ್ ನಿಂದಾಗಿ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕರ್ನಾಟಕದ ನೂರಾರು ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ತೆರಳಲು ಸಹಾಯ ಮಾಡಿ ಮಾನವೀಯತೆ ಮರೆದಿದ್ದ ಬಾಲಿವುಡ್ ನಟ ಸೋನು ಸೂದ್, ಇದೀಗ ಕೇರಳದಲ್ಲಿ ಸಿಲುಕಿದ್ದ ನೂರಾರು ಯುವತಿಯರನ್ನು ಅವರ ತವರು ರಾಜ್ಯ ಒಡಿಶಾಕ್ಕೆ ಕಳುಹಿಸಲು ಸಹಾಯ ಮಾಡಿದ್ದಾರೆ.
ಲಾಕ್ ಡೌನ್ ನಿಂದಾಗಿ ಒಡಿಶಾದ ಸುಮಾರು 177 ಯುವತಿಯರು ಕೇರಳದಲ್ಲಿ ಸಿಲುಕಿಕೊಂಡಿದ್ದರು. ಅಂದಿನಿಂದ ತಮ್ಮ ಊರಿಗೆ ಹೋಗಲು ಯಾವುದೇ ವ್ಯವಸ್ಥೆ ಇಲ್ಲದೆ ಯುವತಿಯರು ಪರದಾಡುತ್ತಿದ್ದರು. ಈ ಯುವತಿಯ ಬಗ್ಗೆ ಭುವನೇಶ್ವರದಲ್ಲಿರುವ ಸ್ನೇಹಿತರೊಬ್ಬರ ಮೂಲಕ ತಿಳಿದ ಸೋನು ಸೂದ್, ವಿಮಾನ ನಿಲ್ದಾಣಗಳನ್ನು ತೆರೆಯಲು ಕೇರಳ ಮತ್ತು ಒಡಿಶಾ ಸರ್ಕಾರಗಳಿಂದ ಅನೇಕ ಅನುಮತಿಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ಸೋನು ಸೂದ್ ಯುವತಿಯರ ರಕ್ಷಣೆ ಮಾಡಿದ್ದು, ಅಲ್ಲಿಂದ ಅವರನ್ನು ವೈಮಾನಿಕ ಮಾರ್ಗದ ಮೂಲಕ ಒಡಿಶಾಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಇನ್ನು ಈ ಹಿಂದೆ ಕೂಡ ಸೋನು ಸೂದ್ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜೊತೆಗೆ ಚರ್ಚಿಸಿ ಕಲಬುರಗಿಯಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಅನುಮತಿ ಪಡೆದಿದ್ದರು. ಈ ಮೂಲಕ ತಮ್ಮ ಸ್ವಂತ ಖರ್ಚಿನಲ್ಲಿ ಒಟ್ಟು ಹತ್ತು ಬಸ್ ಗಳ ವ್ಯವಸ್ಥೆ ಮಾಡಿ ಥಾಣೆಯಿಂದ ಕಲಬುರಗಿಗೆ ತಾವೇ ಮುಂದೆ ನಿಂತು ಕಾರ್ಮಿಕರನ್ನು ಕಳುಹಿಸಿಕೊಟ್ಟಿದ್ದರು.








