ಪಾಕ್ ನೆಲದಲ್ಲಿ ಕ್ರಿಕೆಟ್ ಕಲರವ.. ಜನವರಿಯಲ್ಲಿ ದಕ್ಷಿಣ ಆಫ್ರಿಕಾದ ಪಾಕ್ ಪ್ರವಾಸ
ಕೊನೆಗೂ ಪಾಕಿಸ್ತಾನ ನೆಲದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕಲರವ ಶುರುವಾಗುವ ಸಮಯ ಬಂದಾಗಿದೆ. 14 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ಮಾಡುವ ಧೈರ್ಯ ಮಾಡಿದೆ.
ಇದು ಪಾಕ್ ಕ್ರಿಕೆಟ್ಗೆ ಹೊಸ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಾಂತಾಗಿದೆ.
ಹೌದು, 2009ರಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ನಡೆದ ಗುಂಡಿನ ದಾಳಿಯ ನಂತರ ಪಾಕ್ ನೆಲಕ್ಕೆ ಕಾಲಿಡಲು ವಿದೇಶಿ ತಂಡಗಳು ಭಯಪಡುತ್ತಿದ್ದವು. ಪಾಕ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳೇ ಸ್ತಬ್ದವಾಗಿದ್ದವು.
ಆ ನಂತರ ಪಾಕಿಸ್ತಾನ ತಟಸ್ಠ ತಾಣಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸುಮಾರು ಹತ್ತು ವರ್ಷಗಳ ನಂತರ ಅಂದ್ರೆ 2019ರಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ತಂಡಗಳು ಪಾಕ್ ನೆಲದಲ್ಲಿ ಪಂದ್ಯಗಳನ್ನು ಆಡಿದ್ದವು.
ಅದೇ ರೀತಿ ಇತ್ತೀಚೆಗೆ ಇಂಗ್ಲೆಂಡ್ ತಂಡ ಕೂಡ ಪಾಕ್ ನೆಲದಲ್ಲಿ ಆಡುವ ಇರಾದೆಯನ್ನು ವ್ಯಕ್ತಪಡಿಸಿತ್ತು. ಇಂಗ್ಲೆಂಡ್ ತಂಡ ಪಾಕ್ ನೆಲದಲ್ಲಿ 2 ಟಿ-ಟ್ವೆಂಟಿ ಪಂದ್ಯಗಳನ್ನು ಆಡಲಿದೆ.
ಇದಕ್ಕು ಮುನ್ನ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಎರಡು ಟೆಸ್ಟ್ ಪಂದ್ಯ ಹಾಗೂ ಮೂರು ಟಿ-ಟ್ವೆಂಟಿ ಪಂದ್ಯಗಳನ್ನು ಆಡಲಿದೆ.
ಜನವರಿ 26ರಿಂದ 30ರವರೆಗೆ ಕರಾಚಿಯಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದ್ರೆ, ಫೆಬ್ರವರಿ 4ರಿಂದ 8ರವರೆಗೆ ರಾವಲ್ಪಿಂಡಿಯಲ್ಲಿ ನಡೆಯಲಿದೆ. ಫೆಬ್ರವರಿ 14ರಂದು ಕೊನೆಯ ಟಿ-ಟ್ವೆಂಟಿ ಪಂದ್ಯ ನಡೆಯಲಿದೆ.
ಈ ಕುರಿತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಪ್ರತಿಕ್ರಿಯೆ ನೀಡಿದೆ. ಪಾಕ್ ನೆಲದಲ್ಲಿ ದಕ್ಷಿಣ ಆಫ್ರಿಕಾ ಆಟಗಾರರಿಗೆ ಸೂಕ್ತ ಭದ್ರತೆ ನೀಡಬೇಕು. ಹಲವು ಷರತ್ತುಗಳನ್ನು ಹಾಕೊಂಡು ಈ ಸರಣಿಗಳು ನಡೆಯಲಿವೆ.
ಅದೇ ರೀತಿ ತವರು ನೆಲದಲಿ ನಡೆಯುವ ಟೆಸ್ಟ್ ಮತ್ತು ಟಿ-20 ಸರಣಿಗಳ ಬಗ್ಗೆ ಪಾಕ್ ಆಟಗಾರರು ಹರ್ಷ ವ್ಯಕ್ತಪಡಿಸಿದ್ದಾರೆ. ಅದ್ರಲ್ಲೂ ಪಾಕ್ ತಂಡದ ನಾಯಕ ಬಾಬರ್ ಅಝಮ್ ಖುಷಿ ಇಮ್ಮಡಿಗೊಂಡಿದೆ.
ಒಟ್ಟಿನಲ್ಲಿ ಇಮ್ರಾನ್ ಖಾನ್ ಪ್ರಧಾನಿಯಾದ ನಂತರ ಪಾಕ್ ನೆಲದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜನೆ ಮಾಡುವಲ್ಲಿ ಸಫಲರಾಗಿದ್ದಾರೆ. ಆದ್ರೆ ಪ್ರವಾಸಿ ತಂಡಗಳು ಭಯ ಮತ್ತು ಭದ್ರತಾ ಸಿಬ್ಬಂದಿಗಳ ಕಣ್ಗಾವಲಿನಲ್ಲಿ ಆಡಬೇಕು ಎಂಬುದನ್ನು ಮರೆಯುವಂತಿಲ್ಲ.