ಬೆಳಗಾವಿ: ದಸರಾ (Dasara) ಹಬ್ಬ (Festival)ದ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ತೆರಳುವ ಹಾಗೂ ಹಬ್ಬ ಮುಗಿಸಿಕೊಂಡು ಬರುವ ಪ್ರಯಾಣಿಕರಿಗಾಗಿಗ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ (North West Transport) 500ಕ್ಕೂ ಅಧಿಕ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.
ಮಂಗಳೂರು, ಗೋವಾ, ಮಹಾರಾಷ್ಟ್ರದ ಪುಣೆ ಸೇರಿದಂತೆ ರಾಜ್ಯದ ಮತ್ತು ನೆರೆಯ ರಾಜ್ಯಗಳ ವಿವಿಧ ಭಾಗಗಳಿಂದ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ. ಅ.20, 21 ಹಾಗೂ 22ರಂದು ಬೆಂಗಳೂರು, ಮಂಗಳೂರು, ಪುಣೆ, ಗೋವಾ ಮುಂತಾದ ಸ್ಥಳಗಳಿಂದ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಚಿಕ್ಕೋಡಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ ಸೇರಿದಂತೆ ಪ್ರಮುಖ ನಗರಗಳಿಗೆ ಹೆಚ್ಚುವರಿ ಬಸ್ ಸೇವೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ.
ಸ್ಥಳೀಯ ಬಸ್ ನಿಲ್ದಾಣಗಳಿಂದ ಜಿಲ್ಲೆಯೊಳಗೆ ಹಾಗೂ ನೆರೆಯ ಜಿಲ್ಲೆಗಳಿಗೆ ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಹೆಚ್ಚುವರಿ ಬಸ್ಗಳನ್ನು ಬಿಡಲಾಗುತ್ತದೆ. ವೋಲ್ವೊ, ಸ್ಲೀಪರ್, ರಾಜಹಂಸ ಸೇರಿದಂತೆ 50 ಐಷಾರಾಮಿ ಬಸ್ಸುಗಳು ಹಾಗೂ 200 ವೇಗದೂತ ಸಾರಿಗೆಗಳು ಸೇರಿದಂತೆ 250ಕ್ಕೂ ಹೆಚ್ಚು ಹೆಚ್ಚುವರಿ ಬಸ್ಸುಗಳನ್ನು ಬಿಡಲು ನಿರ್ಧರಿಸಲಾಗಿದೆ.
ಮತ್ತೆ ಹಬ್ಬ ಮುಗಿಸಿಕೊಂಡು ಮರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಅ.24 ಹಾಗೂ 25ರಂದು ಸಂಸ್ಥೆಯ ವ್ಯಾಪ್ತಿಯ ಪ್ರಮುಖ ಬಸ್ ನಿಲ್ದಾಣಗಳಿಂದ ಬೆಂಗಳೂರು, ಮಂಗಳೂರು, ಗೋವಾ, ಮಹಾರಾಷ್ಟ್ರದ ಪುಣೆ ಸೇರಿದಂತೆ ರಾಜ್ಯದ ಮತ್ತು ನೆರೆಯ ರಾಜ್ಯಗಳ ವಿವಿಧ ಜನದಟ್ಟಣೆಗೆ ಅನುಗುಣವಾಗಿ 250ಕ್ಕೂ ಹೆಚ್ಚು ಬಸ್ಸು ಸೇವೆ ಒದಗಿಸಲಾಗಿದೆ.