ನವದೆಹಲಿ: ಇಂದು ಸಂಸತ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ (Union Budget) ಘೋಷಿಸಿದ್ದಾರೆ. ಇದು ಮುಗಿಯುತ್ತಿದ್ದಂತೆ ಚಿನ್ನ (Gold) ಮತ್ತು ಬೆಳ್ಳಿ (Silver) ದರದಲ್ಲಿ ಭಾರೀ ಇಳಿಕೆ ಕಂಡಿದೆ.
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ(MCX) 10 ಗ್ರಾಂ ಚಿನ್ನದ ಬೆಲೆ 3,916 ರೂ. ಇಳಿಕೆಯಾಗಿದ್ದರೆ 1 ಕೆಜಿ ಬೆಳ್ಳಿ ದರ 4,213 ರೂ. ಇಳಿಕೆ ಕಂಡಿದೆ. ಹೀಗಾಗಿ ಈಗ 10 ಗ್ರಾಂ ಚಿನ್ನದ ದರ 68,789 ರೂ. ಕೊನೆಯಾದರೆ 1 ಕೆಜಿ ಬೆಳ್ಳಿ ದರ 84,990 ರೂ.ನಲ್ಲಿ ಅಂತ್ಯವಾಗಿದೆ. ಅಲ್ಲದೇ, ವಿಶ್ವದ ಹಲವು ವಿದ್ಯಮಾನಗಳು ಕೂಡ ಚಿನ್ನ, ಬೆಳ್ಳಿಯ ದರ ಏರಿಕೆಗೆ ಕಾರಣವಾಗಿವೆ. ಈ ಬಜೆಟ್ ನಲ್ಲಿ ಚಿನ್ನ (Gold) ಮತ್ತು ಬೆಳ್ಳಿಯ (Silver) ಆಮದು ಸುಂಕವನ್ನು ಕಡಿತ ಮಾಡಿದ್ದರಿಂದ ಆಭರಣಗಳ ದರ ಇಳಿಕೆಯಾಗಲಿದೆ.
ಹಿಂದೆ ಚಿನ್ನ ಮತ್ತು ಬೆಳ್ಳಿಯ ಆಮದು ಸುಂಕ ಶೇ. 15ರಷ್ಟಿತ್ತು. ಆದರೆ, ಈಗ ಇದನ್ನು ಶೇ. 6ಕ್ಕೆ ಇಳಿಕೆ ಮಾಡಲಾಗಿದೆ. ದೇಶದಲ್ಲಿ ಚಿನ್ನ ಮತ್ತು ಬೆಲೆಬಾಳುವ ಲೋಹದ ಆಭರಣಗಳಲ್ಲಿ ದೇಶೀಯ ಮೌಲ್ಯವರ್ಧನೆ ಹೆಚ್ಚಿಸಲು ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.6ಕ್ಕೆ ಮತ್ತು ಪ್ಲಾಟಿನಂ ಮೇಲೆ ಶೇ. 6.4ಕ್ಕೆ ಇಳಿಸಲು ನಾನು ಪ್ರಸ್ತಾಪಿಸುತ್ತೇನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಹೀಗಾಗಿ ಚಿನ್ನ, ಬೆಳ್ಳಿಯ ದರ ಇಳಿಕೆಯ ಹಾದಿ ಹಿಡಿದಿವೆ.