ಬೆಂಗಳೂರು : ದೇಶದಲ್ಲಿ ಇತ್ತೀಚೆಗೆ ತನಿಖಾ ಸಂಸ್ಥೆಗಳು ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಎಂಬುವುದಕ್ಕೆ ಸಾಕಷ್ಟು ಉದಾಹರಣೆಗಳು ಸಿಕ್ಕಿವೆ. ಸಿಐಡಿ ತನಿಖೆಗೆ ವೇಗ ನೀಡುವುದಕ್ಕಾಗಿಯೇ ಸ್ಥಾಪಿಸಲಾಗಿದ್ದ ಕೋರ್ಟ್ ಮಾನಿಟರಿಂಗ್ ಸೆಲ್ ನಿಂದಾಗಿ ಈಗ ವೇಗ ಹೆಚ್ಚಾಗಿದೆ.
ಸಿಐಡಿ ತನಿಖೆ ಕೈಗೊಂಡಿದ್ದ ನಾಲ್ಕು ಪ್ರಕರಣದ ಆರೋಪಿಗಳಿಗೆ ಈಗಾಗಲೇ ಶಿಕ್ಷೆಯಾಗಿದೆ. ಈ ಮೂಲಕ ಶಿಕ್ಷೆ ಪ್ರಮಾಣ ಕೂಡ ಕಳೆದ 10 ವರ್ಷಗಳಿಂದ ಶೇ. 50ರಷ್ಟು ಹೆಚ್ಚಳವಾಗಿದೆ. 2014-2023 ರ ಮಧ್ಯೆ ಸಿಐಡಿಯ 268ಕ್ಕೂ ಅಧಿಕ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದವು. 2022 ರಲ್ಲಿ ಕೇವಲ ಸಿಐಡಿಯ 2 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಶಿಕ್ಷೆ ಪ್ರಮಾಣ ಅತ್ಯಂತ ಕಡಿಮೆ ಶೇ.12.10 ರಷ್ಟಿತ್ತು. ಬಾಕಿ ಉಳಿದುರುವ ಕೇಸ್ ಗಳನ್ನು ಇತ್ಯರ್ಥ ಪಡಿಸುವುದಕ್ಕಾಗಿ ಓರ್ವ ಇನ್ಸ್‌ಪೆಕ್ಟರ್‌ಗೆ ಕೋರ್ಟ್ ಕೇಸ್‌ನ ನಿಗಾ ವಹಿಸುವ ಜವಾಬ್ದಾರಿ ನೀಡಿತ್ತು. ಪರಿಣಾಮ, ಈ ವರ್ಷದ ಆರಂಭದಲ್ಲಿಯೇ ನಾಲ್ಕು ಪ್ರಕರಣಗಳಲ್ಲಿನ ಆರೋಪಿಗಳಿಗೆ ಶಿಕ್ಷೆಯಾಗಿದೆ. ಈ ಪ್ರಮಾಣ ವರ್ಷಾಂತ್ಯಕ್ಕೆ ಹೆಚ್ಚಳವಾಗುವ ಭರವಸೆಯಿದೆ ಎಂದು ಸಿಐಡಿ ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ಉಡುಪಿ ವಿದ್ಯಾರ್ಥಿನಿಯರು ವಿದ್ಯಾರ್ಥಿನಿಯ ಬೆತ್ತಲೆ ವಿಡಿಯೋ ಮಾಡಿರುವ ಪ್ರಕರಣ, ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ ಮಾಡಿರು ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ತನಿಖೆಯನ್ನು ಸದ್ಯ ಸಿಐಡಿ ನಡೆಸುತ್ತಿದೆ. ಅಲ್ಲದೇ, ಒಟ್ಟಾರೆ 460 ಪ್ರಕರಣಗಳು ಸಿಐಡಿ ತನಿಖಾ ಹಂತದಲ್ಲಿವೆ. ಅಲ್ಲದೇ, ಈ ತನಿಖೆಗೆ ವೇಗ ನೀಡಲಾಗಿದ್ದು, ನಿಗದಿತ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬಾತ ಮಾಜಿ ಪತ್ನಿಗೆ ಇ-ಮೇಲ್ ಮುಖಾಂತರ ಅಶ್ಲೀಲ ವಿಡಿಯೊ ಕಳುಹಿಸಿದ್ದ ಖಾಸಗಿ ಕಂಪನಿ ಉದ್ಯೋಗಿಗೆ 1 ತಿಂಗಳು ಸಾದಾ ಜೈಲು, 45 ಸಾವಿರ ರೂ. ದಂಡ ವಿಧಿಸಲಾಗಿದೆ. ಒಟ್ಟಾರೆ ಕೋರ್ಟ್ ಮಾನಿಟರಿಂಗ್ ಸೆಲ್ ಸ್ಥಾಪಿಸಿದ ಬಳಿಕ ನ್ಯಾಯಾಲಯಗಳಲ್ಲಿನ ಹೆಚ್ಚಿನ ಕೇಸ್‌ಗಳು ವಿಲೇವಾರಿಯಾಗುತ್ತಿವೆ. ಈ ವರ್ಷ ಇಲ್ಲಿಯವರೆಗೆ ಶೇ.50ರಷ್ಟು ಪ್ರಮಾಣದ ಶಿಕ್ಷೆ ಪ್ರಮಾಣ ಹೆಚ್ಚಳವಾಗಿದೆ.