ಇಂಗ್ಲೆಂಡ್ ವಿರುದ್ಧ ಗೆದ್ದರೂ ನೆಟ್ ರನ್ರೇಟ್ನಲ್ಲಿ ಸೋತ ಆಫ್ರಿಕಾ-ಮತ್ತೊಮ್ಮೆ ಚೋಕರ್ಸ್ ಆದ ಹರಿಣಗಳು..!
ಶಾರ್ಜಾದಲ್ಲಿ ದಕ್ಷಿಣ ಆಫ್ರಿಕಾ ಎಲ್ಲವನ್ನೂ ಮಾಡಿತ್ತು. ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು.. ಬೌಲಿಂಗ್ನಲ್ಲೂ ಮಿಂಚಿತ್ತು. ಬಲಿಷ್ಠ ಇಂಗ್ಲೆಂಡ್ ತಂಡವನ್ನು 10 ರನ್ಗಳಿಂದ ಸೋಲಿಸಿತ್ತು. ಆದರೆ ಸೆಮಿಫೈನಲ್ನಿಂದ ಮಾತ್ರ ಹೊರಬಿತ್ತು. ನೆಟ್ ರನ್ರೇಟ್ ಹೋರಾಟದಲ್ಲಿ ಆಸ್ಟ್ರೇಲಿಯಾ ಮುಂದೆ ಸಾಗಿದರೆ ದಕ್ಷಿಣ ಆಫ್ರಿಕಾ ಹಿಂದೆ ಬಿದ್ದು ಚೋಕರ್ಸ್ ಪಟ್ಟವನ್ನು ಮತ್ತೊಮ್ಮೆ ಪ್ರಮಾಣೀಕರಿಸಿಕೊಂಡಿತು.
ಶಾರ್ಜಾದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡಿತು. ಅಬ್ಬರದ ಆಟ ಆಡಬೇಕು ಅನ್ನುವ ಗುರಿ ಜೊತೆ ಕಣಕ್ಕಿಳಿದ ದಕ್ಷಿಣ ಆಫ್ರಿಕಾ ರಿಜಾ ಹೆಂಡ್ರಿಕ್ಸ್ (2 ರನ್) ಬೇಗನೆ ಕಳೆದುಕೊಂಡಿತು. ಆದರೆ ಕ್ವಿಂಟನ್ ಡಿ ಕಾಕ್ ಮತ್ತು ರಾಸಿ ವ್ಯಾಂಡರ್ ಡ್ಯೂಸನ್ ಅಬ್ಬರದ ಆಟ ಆಡಿದರು. ಈ ಜೋಡಿ 2ನೇ ವಿಕೆಟ್ಗೆ 71 ರನ್ಗಳ ಜೊತೆಯಾಟ ಆಡಿತು. ಡಿ ಕಾಕ್ 34 ರನ್ಗಳಿಸಿ ಔಟಾದರು.
ವ್ಯಾಂಡರ್ ಡ್ಯೂಸನ್ ಜೊತೆ ಸೇರಿಕೊಂಡ ಏಡಿಯನ್ ಮಾರ್ಕ್ ರಾಂ ಸ್ಪೋಟಕ ಆಟ ಆಡಿದರು. ಅರ್ಧಶತಕದ ಬಳಿಕ ವ್ಯಾಂಡರ್ ಡ್ಯೂಸನ್ ಕೂಡ ಅಪಾಯಕಾರಿ ಆಟ ಆಡಿದರು. ಮಾರ್ಕ್ ರಾಂ ಕೇವಲ 25 ಎಸೆತಗಳಲ್ಲಿ ಅಜೇಯ 52 ರನ್ ಸಿಡಿಸಿದರೆ , ವ್ಯಾಂಡರ್ ಡ್ಯೂಸನ್ 60 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 4 ಫೋರ್ ನೆರವಿನಿಂದ ಅಜೇಯ 94 ರನ್ಗಳಿಸಿದರು. 20 ಓವರುಗಳಲ್ಲಿ ದಕ್ಷಿಣ ಆಫ್ರಿಕಾ 2 ವಿಕೆಟ್ ಕಳೆದುಕೊಂಡು 189 ರನ್ಗಳಿಸಿತ್ತು.
ಆಸ್ಟ್ರೇಲಿಯಾವನ್ನು ರನ್ರೇಟ್ ಮೂಲಕ ಸೋಲಿಸಿ ಸೆಮಿಫೈನಲ್ಗೇರಬೇಕಾದರೆ ದಕ್ಷಿಣ ಆಫ್ರಿಕಾ ಇಂಗ್ಲೆಂಡ್ ತಂಡವನ್ನು 131 ರನ್ಗಳಿಗೆ ಕಟ್ಟಿಹಾಕಬೇಕಿತ್ತು. ಆದರೆ ಇಂಗ್ಲೆಂಡ್ನ ಬಲಿಷ್ಠ ಬ್ಯಾಟಿಂಗ್ ಎದುರು ಈ ಪ್ಲಾನ್ ನಡೆಯಲಿಲ್ಲ. 15ನೇ ಓವರ್ನಲ್ಲೇ ಇಂಗ್ಲೆಂಡ್ 131ರನ್ಗಳ ಗಡಿ ದಾಟಿ ಆಸ್ಟ್ರೇಲಿಯಾದ ಮುಖದಲ್ಲಿ ನಗು ತಂದರೆ ದಕ್ಷಿಣ ಆಫ್ರಿಕಾ ತಂಡ ನಿರಾಸೆಯಲ್ಲಿ ಮುಳುಗಿತು.
ಇಂಗ್ಲೆಂಡ್ ಚೇಸಿಂಗ್ ಆರಂಭವನ್ನು ಭರ್ಜರಿಯಾಗಿ ಶುರುಮಾಡಿತು. ಆದರೆ ಜೇಸನ್ ರಾಯ್ (15 ರನ್)ಗಾಯಗೊಂಡು ಹೊರ ನಡೆದರು. ಬಟ್ಲರ್ ಬಿರುಸಿನ 26 ರನ್ಗಳಿಸಿದರು. ಜಾನಿ ಬೇರ್ ಸ್ಟೋವ್ 1 ರನ್ಗಳಿಗೆ ಆಟ ಮುಗಿಸಿದರು. ಮೊಯಿನ್ ಅಲಿ (37 ರನ್) ಮತ್ತು ಡೇವಿಡ್ ಮಲಾನ್ (33 ರನ್) ರನ್ ಕಲೆಹಾಕಿ ಸೌತ್ ಆಫ್ರಿಕಾದ ಸೆಮಿಫೈನಲ್ ಆಸೆಯನ್ನು ಚಿವುಟಿ ಹಾಕಿದರು. ಲಿಯಂ ಲಿವಿಂಗ್ ಸ್ಟೋನ್ ಕೂಡ ಬಿರುಸಿನ 28 ರನ್ಗಳಿಸಿದರು.
20ನೇ ಓವರ್ನಲ್ಲಿ ಕಗಿಸೋ ರಬಾಡ ಹ್ಯಾಟ್ರಿಕ್ ಸಾಧನೆಯನ್ನು ಕೂಡ ಮಾಡಿದರು. ಕ್ರಿಸ್ ವೋಕ್ಸ್, ಇಯಾನ್ ಮೊರ್ಗಾನ್ ಮತ್ತು ಕ್ರಿಸ್ ಜೊರ್ಡಾನ್ ವಿಕೆಟ್ ಪಡೆದ ರಬಾಡಾ ಹ್ಯಾಟ್ರಿಕ್ ಸಾಧನೆ ಮಾಡಿದರು. 20 ಓವರುಗಳಲ್ಲಿ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡು 179 ರನ್ಗಳಿಸಿ 10 ರನ್ಗಳಿಂದ ಪಂದ್ಯ ಸೋತಿತು. ದಕ್ಷಿಣ ಅಫ್ರಿಕಾ ಪಂದ್ಯ ಗೆದ್ದರೂ ಸೆಮಿಫೈನಲ್ನಿಂದ ಗೇಟ್ಪಾಸ್ ಪಡೆಯಿತು.