ಇದು ಪಂಚೇಂದ್ರಿಯಗಳಿಲ್ಲದ ದಪ್ಪ ಚರ್ಮದ ಸರ್ಕಾರ :ಎಸ್.ಆರ್.ಪಾಟೀಲ್
ರಾಯಚೂರು: ಪಂಚೇಂದ್ರಿಯಗಳಿಲ್ಲದ ದಪ್ಪ ಚರ್ಮದ ಸರ್ಕಾರ ಇದು. ರಾಜ್ಯದ ಜನರ ಬಗ್ಗೆ ಸರ್ಕಾರಕ್ಕೆ ಎಳ್ಳಷ್ಟು ಕಾಳಜಿಯಿಲ್ಲ, ಕುರ್ಚಿ ಉಳಿಸಿಕೊಳ್ಳಲು ಓಡಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಔಷಧಿ ಸರಬರಾಜು ಮಾಡುವಲ್ಲಿ ಸರ್ಕಾರ ಸಂಪೂರ್ಣ ಸೋತಿದೆ. ಲಿಕ್ವಿಡ್ ಪ್ರೊಫೈಲ್ ನಲ್ಲಿ ಕೊಡುತ್ತಿರುವ ಔಷಧಿ ಜ್ವರ ,ವಾಂತಿ, ಮೈಕೈ ಬಾವಿನಂತ ಅಡ್ಡಪರಿಣಾಮ ಬೀರುತ್ತಿದೆ.
ಅಂಪೋಟೆರಿಸಿನ್ ಬಿ ಔಷಧಿಯನ್ನೇ ತರಿಸಲು ಕೇಳಿದ್ದೇವೆ. ಆದ್ರೆ ಔಷಧಿ ಸ್ಟಾಕ್ ಇಲ್ಲಾ, ಉತ್ಪಾದನೆ ಆಗುತ್ತಿಲ್ಲ ಅಂತ ಅಧಿಕಾರಿಗಳು ಕಾರಣ ಹೇಳುತ್ತಿದ್ದಾರೆ. ಒಟ್ಟಾರೆ ಮೊದಲೇಯಲ್ಲಿ ಪಾಠ ಕಲಿತರು ಎರಡನೇ ಅಲೆ ಸಮರ್ಪಕವಾಗಿ ಎದುರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಇನ್ನು ಎಸ್ ಎಸ್ ಎಲ್ ಸಿ ಪರೀಕ್ಷೆ ಬಗ್ಗೆ ಮಾತನಾಡಿ, ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸುವ ವಿಚಾರದಲ್ಲಿ ಶಿಕ್ಷಣ ಸಚಿವರು ಹಠ ಮಾಡಬಾರದು. ಸುಪ್ರೀಂ ಕೋರ್ಟ್ ಆದೇಶ ಕೇವಲ ಆಂಧ್ರಪ್ರದೇಶಕ್ಕೆ ಮಾತ್ರ ಅಲ್ಲಾ ಎಲ್ಲೆಡೆ ಅನ್ವಯವಾಗುತ್ತೆ. ಆಂಧ್ರದಲ್ಲಿ ಪರೀಕ್ಷೆ ನಡೆಸದಂತೆ ಸರ್ವೊಚ್ಚ ನ್ಯಾಯಾಲಯ ಆದೇಶಿಸಿದೆ ಎಂದರು.