ಇಂದು ದೆಹಲಿ ಮ್ಯಾರಾಥಾನ್‌: ಶ್ರೀನಿ ಬುಗತಾ ಹಾಗೂ ಸುಧಾ ಸಿಂಗ್‌ಗೆ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಗುರಿ

1 min read
Srini Bugata

ಇಂದು ದೆಹಲಿ ಮ್ಯಾರಾಥಾನ್‌: ಶ್ರೀನಿ ಬುಗತಾ ಹಾಗೂ ಸುಧಾ ಸಿಂಗ್‌ಗೆ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಗುರಿ

ನವದೆಹಲಿ: ಭಾರತದ ಅಗ್ರ ಓಟಗಾರರಾದ ಶ್ರೀನಿ ಬುಗತಾ ಹಾಗೂ ಸುಧಾ ಸಿಂಗ್ ಇಂದು (ಮಾ.೭, ೨೦೨೧) ಇಲ್ಲಿ ನಡೆಯಲಿರುವ ೬ನೇ ಆವೃತ್ತಿಯ ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ನವದೆಹಲಿ ಮ್ಯಾರಾಥಾನ್‌ನಲ್ಲಿ ಟೋಕಿಯೋ ಒಲಿಂಪಿಕ್ಸ್‌ನ ಅರ್ಹತಾ ಗುರಿ ತಲುಪುವ ವಿಶ್ವಾಸದಲ್ಲಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಬ್ಬರು ಅಗ್ರ ಅಥ್ಲೀಟ್‌ಗಳು, ಟೋಕಿಯೋಗೆ ತೆರಳಲು ಬೇಕಿರುವ ಅರ್ಹತೆಯ ಬಗ್ಗೆ ತಮಗೆ ಸಂಪೂರ್ಣ ಅರಿವಿದ್ದು, ಅದಕ್ಕಾಗಿ ತಾವು ಕೈಗೊಂಡಿರುವ ತರಬೇತಿಯ ವಿವರಗಳನ್ನು ಬಹಿರಂಗಪಡಿಸಿದರು.
ಪುಣೆಯಲ್ಲಿರುವ ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ಆಂಧ್ರ ಪ್ರದೇಶದ ರೈತ ಕುಟುಂಬದ ಶ್ರೀನಿ ಬುಗತಾ, ತಾವು ತಮ್ಮ ಒಲಿಂಪಿಕ್ ಕನಸನ್ನು ನನಸಾಗಿಸಿಕೊಳ್ಳಲು ಹೋರಾಟ ನಡೆಸಲಿದ್ದು, ೨ ಗಂಟೆ ೧೧ ನಿಮಿಷ ೩೬ ಸೆಕೆಂಡ್‌ಗಳಲ್ಲಿ ಗುರಿ ತಲುಪಬೇಕು ಎಂದುಕೊಂಡಿರುವುದಾಗಿ ಹೇಳಿದರು. ‘ಕೋವಿಡ್ ಕಾರಣಗಳಿಂದಾಗಿ ಕೆಲ ಅವಕಾಶಗಳು ಕೈತಪ್ಪಿದವು. ಆದರೆ ಈ ವರ್ಷ ನನ್ನ ವೈಯಕ್ತಿಯ ಶ್ರೇಷ್ಠ ೨ ಗಂಟೆ ೧೮ ನಿಮಿಷ ೩೬ ಸೆಕೆಂಡ್‌ಗಳಾಗಿದ್ದು, ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಬೇಕಿರುವ ಗುರಿಯನ್ನು ತಲುಪಲಿದ್ದೇನೆ ಎನ್ನುವ ನಂಬಿಕೆ ಇದೆ’ ಎಂದರು.

೩೦೦೦ ಮೀ. ಸ್ಟೀಪಲ್‌ಚೇಸ್‌ನಲ್ಲಿ ಏಷ್ಯನ್ ಗೇಮ್ಸ್ ಮಾಜಿ ಚಾಂಪಿಯನ್ ಸುಧಾ ಸಿಂಗ್ ಮಾತನಾಡಿ, ತಾವು ಒಪಿ ಜೈಶಾ ನಿರ್ಮಿಸಿದ್ದ ೨ ಗಂಟೆ ೩೦ ನಿಮಿಷಗಳ ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಗುರಿ ಹೊಂದಿರುವುದಾಗಿ ಹೇಳಿದರು. ಇದರೊಂದಿಗೆ ಭಾರತೀಯ ತಂಡದಲ್ಲಿ ಸ್ಥಾನ ಗಳಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದರು.

‘ಕಳೆದ ವರ್ಷ ಒಂದು ವರ್ಷದಲ್ಲಿ ಬಹಳ ಶ್ರಮ ವಹಿಸಿ ಅಭ್ಯಾಸ ನಡೆಸಿದ್ದೇನೆ ಎನ್ನುವ ನಂಬಿಕೆ ನನಗಿದೆ. ನಾಳೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ನನ್ನಿಂದ ಸಾಧ್ಯವಾಗುವ ಶ್ರೇಷ್ಠ ಪ್ರದರ್ಶನವನ್ನು ನೀಡುತ್ತೇನೆ’ ಎಂದರು.
ಇತ್ತೇಚೆಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಅರ್ಜುನ ಪ್ರಶಸ್ತಿ ವಿಜೇತೆಯನ್ನು ಪತ್ರಿಕಾಗೋಷ್ಠಿಗೂ ಮೊದಲು ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಸ್ಮನಾನಿಸಿದರು.

ಎನ್‌ಇಬಿ ಸ್ಪೋಟ್ಸ್ ಆಯೋಜಿಸುತ್ತಿರುವ, ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್‌ನಿಂದ ಹಾಗೂ ಫಿಟ್ ಇಂಡಿಯಾದಿಂದ ಮಾನ್ಯತೆ ಪಡೆದಿರುವ ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ನವದೆಹಲಿ ಮ್ಯಾರಾಥಾನ್ ಓಟದಲ್ಲಿ ೧೦೦೦ ಅಥ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ. ಕೋವಿಡ್ ನಂತರ ಭಾರತದಲ್ಲಿ ನಡೆಯಲಿರುವ ಅತಿದೊಡ್ಡ ಕ್ರೀಡಾಕೂಟಗಳಲ್ಲಿ ಇದು ಸಹ ಒಂದೆನಿಸಲಿದೆ.

 Srini Bugata

ವಿಶ್ವದ ವಿವಿಧ ಭಾಗಗಳಲ್ಲಿ ಒಟ್ಟು ೫ ದಿನಗಳ ಕಾಲ ನಡೆಯಲಿರುವ ವರ್ಚುವಲ್ ಮ್ಯಾರಾಥಾನ್‌ನಲ್ಲಿ ಸುಮಾರು ೧೫೦೦೦ ಮಂದಿ ಓಡಲಿದ್ದಾರೆ. ಈ ಸ್ಪರ್ಧೆ ಮಾ.೭, ೨೦೨೧ರಿಂದ ಆರಂಭಗೊಳ್ಳಲಿದೆ.
ಓಟಗಾರರು ಒಟ್ಟು ೪ ವಿಭಾಗಗಳಲ್ಲಿ ಭಾಗವಹಿಸಲಿದ್ದಾರೆ. ಪೂರ್ಣ ಮ್ಯಾರಾಥಾನ್, ಹಾಫ್ ಮ್ಯಾರಾಥಾನ್, ೧೦ಕೆ ಹಾಗೂ ೫ಕೆ ಓಟಗಳಲ್ಲಿ ಸ್ಪರ್ಧಿಸಲಿದ್ದಾರೆ. ಲೈವ್ ಸ್ಪರ್ಧೆ ನಡೆಯುವ ಸ್ಥಳದಲ್ಲಿ ಕೋವಿಡ್ ತಡೆಗಟ್ಟಲು ಹಾಗೂ ಓಟಗಾರರ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಮಾತನಾಡಿದ, ‘ಕ್ರೀಡೆಯು ಸದಾ ಎಲ್ಲರನ್ನೂ ಒಗ್ಗೂಡಿಸುವ ಚಟುವಟಿಕೆಯಾಗಿದ್ದು, ಎಲ್ಲರಲ್ಲೂ ಸಕಾರಾತ್ಮಕತೆ ಹಾಗೂ ಖುಷಿಯನ್ನು ತರಲಿದೆ. ಕೋವಿಡ್‌ನಿಂದಾಗಿ ವಿಳಂಬಗೊಂಡಿದ್ದ ೬ನೇ ಆವೃತ್ತಿಯ ನವದೆಹಲಿ ಮ್ಯಾರಾಥಾನ್ ಓಟ ಈಗ ನಡೆಯುತ್ತಿರುವುದು ಬಹಳ ಸಂತೋಷ ನೀಡುತ್ತಿದೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಹಾಗೂ ದಾಖಲೆಗಳನ್ನು ಮುರಿಯಲು ಉತ್ಸುಕಗೊಂಡಿರುವ ಶ್ರೀನಿ ಬುಗತಾ ಹಾಗೂ ಸುಧಾ ಸಿಂಗ್‌ಗೆ ಶುಭಾಶಯಗಳನ್ನು ತಿಳಿಸುತ್ತೇನೆ. ಇಂತಹ ಕಠಿಣ ಸಮಯಗಳಲ್ಲಿ ಅಭ್ಯಾಸದತ್ತ ಅವರು ತೋರಿರುವ ಬದ್ಧತೆಯನ್ನು ಮೆಚ್ಚಬೇಕು. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಹಾಗೂ ಭಾರತೀಯ ಅಥ್ಲೆಟಿಕ್ ಫೆಡರೇಷನ್ (ಎಎಫ್‌ಐ) ಕೋವಿಡ್ ಸಮಯದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವ ವೇಳೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕ್ರೀಡಾಪಟುಗಳ ಆರೋಗ್ಯ ಕಾಪಾಡುವಲ್ಲಿ ಬಹಳ ಉತ್ತಮ ಕಾರ್ಯ ನಿರ್ವಹಿಸಿದೆ’ ಎಂದರು.

‘ರಾಷ್ಟ್ರೀಯ ಮ್ಯಾರಾಥಾನ್‌ಗೆ ಈ ಮಟ್ಟದ ಬೆಂಬಲ ಸಿಗುತ್ತಿರುವುದನ್ನು ನೋಡಿ ಬಹಳ ಖುಷಿಯಾಗುತ್ತಿದೆ. ನಮ್ಮ ಕ್ರೀಡಾಪಟುಗಳು ದೇಶಕ್ಕೆ ಮತ್ತಷ್ಟು ಕೀರ್ತಿ ತರಲಿದ್ದಾರೆ ಎನ್ನುವ ವಿಶ್ವಾಸವಿದೆ. ೧೫೦೦೦ ಓಟಗಾರರಿಂದ ವರ್ಚುವಲ್ ಸ್ಪರ್ಧೆಗೆ ಬೆಂಬಲ ಸಿಕ್ಕಿರುವುದು ಪ್ರಶಂಸನೀಯ’ ಎಂದು ಎಎಫ್‌ಐ ಅಧ್ಯಕ ಆದಿಲೆ ಸುಮರಿವಾಲಾ ಹೇಳಿದರು.

‘ಭಾರತೀಯ ಓಟಗಾರರ ಸಮೂಹದಿಂದ ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ನವದೆಹಲಿ ಮ್ಯಾರಾಥಾನ್ ಓಟಕಕೆ ಇಷ್ಟು ದೊಡ್ಡ ಮಟ್ಟದ ಬೆಂಬಲ ಸಿಕ್ಕಿರುವುದು ಖುಷಿಯ ವಿಚಾರ. ಕೋವಿಡ್‌ನಿಂದಾಗಿ ದೇಶದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಲು ಕಷ್ಟದ ಪರಿಸ್ಥಿತಿ ಇದೆ. ಆದರೆ ದೆಹಲಿ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳ ಓಟಗಾರರಿಂದ ಸಕಾರಾತ್ಮಕ ಬೆಂಬಲ ಹಾಗೂ ಓಟಗಾರರಲ್ಲಿರುವ ಉತ್ಸಾಹ ಬಹಳ ಸ್ಫೂರ್ತಿದಾಯವಾಗಿದೆ’ ಎಂದು ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್‌ನ ಚೀಫ್ ಮಾರ್ಕೆಟಿಂಗ್ ಅಧಿಕಾರಿ ಕಾರ್ತಿಕ್ ರಾಮನ್ ಹೇಳಿದರು.

ಓಟ ಸ್ಪರ್ಧೆಯ ನಿರ್ದೇಶಕ ನಾಗರಾಜ್ ಅಡಿಗ ಮಾತನಾಡಿ, ‘ಸ್ಪರ್ಧಿಗಳ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ. ಇಷ್ಟು ದೊಡ್ಡ ಸ್ಪರ್ಧೆ ನಡೆಯುತ್ತಿದೆ ಎನ್ನುವುದು ನಮ್ಮ ಖುಷಿ ಇಮ್ಮಡಿಗೊಳಿಸಿದೆ. ವರ್ಚುವಲ್ ಓಟ ಆಯೋಜಕರಾದ ನಮಗೂ ಒಂದು ಹೊಸ ಅನುಭವ. ದೇಶ ಹಾಗೂ ವಿದೇಶಗಳ ಸ್ಪರ್ಧಿಗಳು ೪ ನಗರಗಳಲ್ಲಿರುವ ಎಎಫ್‌ಎಲ್‌ಐ ಸರ್ಕ್ಯೂಟ್‌ಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಬಹಳ ಉತ್ಸಾಹದಾಯಕವಾಗಿದೆ’ ಎಂದರು.

ಪುರುಷರ ಸ್ಪರ್ಧೆಯಲ್ಲಿ ಭಾರತದ ಅಗ್ರ ಓಟಗಾರರಾದ ರಶ್ಪಾಲ್ ಸಿಂಗ್ (ಹಾಲಿ ಚಾಂಪಿಯನ್), ಬಹದೂರ್ ಸಿಂಗ್ ಧೋನಿ, ಹೆಟ್ರಮ್ ಹಾಗೂ ನರೇಂದ್ರ ಸಿಂಗ್ ರಾವತ್, ಮಹಿಳಾ ಸ್ಪರ್ಧಿಗಳ ಪೈಕಿ ಜ್ಯೋತಿ ಸಿಂಗ್ ಗಾವ್ಟೆ (ಕಳೆದ ವರ್ಷ ಎನ್‌ಡಿಎಂ ವಿಜೇತೆ), ಜಿಗ್ಮೆತ್ ಡೋಲ್ಮಾ, ತ್ಸೆತಾನ್ ಡೋಲ್ಕರ್ ಪ್ರಮುಖರೆನಿಸಿದ್ದಾರೆ.

ಇಂಡಿಯನ್ ಆಯಿಲ್, ಇಂಡಸ್‌ಇಂಡ್, ಸಿಸ್ಕೋ ರನ್ನರ್ಸ್‌ ಸೇರಿ ೫೦ಕ್ಕೂ ಹೆಚ್ಚು ಕಾರ್ಪೋರೇಟ್ ತಂಡಗಳು, ೨೦೦ ಓಟದ ಗುಂಪುಗಳು ಎಎಫ್‌ಎಲ್‌ಐ ಸರ್ಕ್ಯೂಟ್‌ನಲ್ಲಿ ಓಡಲು ನೋಂದಣಿ ಮಾಡಿಕೊಂಡಿವೆ. ಕೋಲ್ಕತಾ(ಪೂರ್ಣ ಮ್ಯಾರಾಥಾನ್), ಮುಂಬೈ (ಹಾಫ್ ಮ್ಯಾರಾಥಾನ್) ಹಾಗೂ ಬೆಂಗಳೂರಲ್ಲಿ (೧೦ಕೆ) ಸ್ಪರ್ಧೆಗಳು ನಡೆಯಲಿವೆ.

ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ನವದೆಹಲಿ ಮ್ಯಾರಾಥಾನ್ ಓಟದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು. ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್‌ನ ಸಿಎಂಒ ಕಾರ್ತಿಕ್ ರಾಮನ್, ಎಎಫ್‌ಐ ಅಧ್ಯಕ್ಷ ಅದಿಲೆ ಸುಮರಿವಾಲಾ, ಸಂಸದೆ ಮೀನಾಕ್ಷಿ ಲೇಖಿ, ಓಟ ಸ್ಪರ್ಧೆಯ ನಿರ್ದೇಶಕ ನಾಗಾರಾಜ ಅಡಿಗ ಉಪಸ್ಥಿತರಿದ್ದರು.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd