ಜು.19 ಮತ್ತು ಜು.22ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ
ಬೆಂಗಳೂರು : ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಜುಲೈ 19 ಮತ್ತು ಜುಲೈ 22 ರಂದು ನಡೆಯಲಿದೆ.
ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಇದೇ ವೇಳೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೂ ಸಿಹಿ ಸುದ್ದಿಯನ್ನು ಸಚಿವರು ನೀಡಿದ್ದಾರೆ.
ವಿಕಾಸಸೌಧದ ತಮ್ಮ ಕೊಠಡಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇವಲ ಎರಡು ದಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯಲಿದೆ. ಜು.19ರಂದು ಸೋಮವಾರ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಜುಲೈ 22ರಂದು ಗುರುವಾರ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬಹುಆಯ್ಕೆ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆಗಳು ಇರಲಿದ್ದು, ವಿದ್ಯಾರ್ಥಿಗಳಿಗೆ ಒಎಂಆರ್ ಶೀಟ್ ನೀಡಲಾಗುತ್ತದೆ. ಪರೀಕ್ಷೆಗಳು ಬೆಳಗ್ಗೆ 10.30ರಿಂದ 1.30ರವರೆಗೆ ನಡೆಯಲಿದೆ.8,76,581 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗುತ್ತಿದ್ದು, 73,066 ಪರೀಕ್ಷಾ ಕೇಂದ್ರಗಳ ಕೊಠಡಿಗಳು ಇರಲಿವೆ. ಕಳೆದ ವರ್ಷ 8.46 ಲಕ್ಷ ವಿದ್ಯಾರ್ಥಿಗಳು ಇದ್ದರು ಎಂದು ಹೇಳಿದರು.
ಎಲ್ಲರಿಗೂ ವ್ಯಾಕ್ಸಿನೇಷನ್ ಕಡ್ಡಾಯವಾಗಿದ್ದು, ಜು. 30ಕ್ಕೆ ಹಾಲ್ ಟಿಕೆಟ್ ನೀಡುತ್ತೇವೆ. ಮಕ್ಕಳಿಗೆ ಸರ್ಜಿಕಲ್ ಇಲ್ಲವೇ ಉತ್ತಮ ಬಟ್ಟೆಯ ಮಾಸ್ಕ್ ನೀಡಲು ಆರೋಗ್ಯ ಇಲಾಖೆ ಸೂಚಿಸಿದೆ. ರೋಗ ಸೂಚನೆ ಇದ್ದ ಮಕ್ಕಳಿಗೆ ಎನ್-95 ಮಾಸ್ಕ್ ನೀಡಲಾಗುವುದು. ಪ್ರತಿ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಕೇಂದ್ರವೂ ಇರಲಿದೆ.ಪರೀಕ್ಷಾ ವೀಕ್ಷಕರಿಗೆ ಮಾಸ್ಕ್ ಕಡ್ಡಾಯ, ಫೇಸ್ ಶೀಲ್ಡ್ ಬಳಸಿದರೂ ಉತ್ತಮ. ಒಂದು ಕೊಠಡಿಯಲ್ಲಿ 12 ಮಕ್ಕಳಿಗೆ ಅವಕಾಶವಿರಲಿದೆ. ಸ್ಕೌಟ್ಸ್ ಅಂಡ್ ಗೈಡ್‍ನ ಸಹಕಾರವಿರಲಿದ್ದು, ಆಶಾ ಕಾರ್ಯಕರ್ತೆಯರು, ಅರೆ ವೈದ್ಯಕೀಯ ಸಿಬ್ಬಂದಿ ಇರುತ್ತಾರೆ. ಪೊಲೀಸ್ ಭದ್ರತೆ ಸಹ ಇರಲಿದೆ ಎಂದು ಸಚಿವರು ತಿಳಿಸಿದರು.









