ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಸ್ಟಾರ್ ಆಲ್ರೌಂಡರ್ ಕೀರಾನ್ ಪೊಲಾರ್ಡ್
ವೆಸ್ಟ್ ಇಂಡೀಸ್ನ ತಂಡದ ಸ್ಪೋಟಕ ಆಟಗಾರ 34 ವರ್ಷದ ಸ್ಟಾರ್ ಆಲ್ರೌಂಡರ್ ಕೀರಾನ್ ಪೊಲಾರ್ಡ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.ಆದರೆ ಐಪಿಎಲ್ ಸೇರಿದಂತೆ ವಿಶ್ವದಾದ್ಯಂತ ಟಿ-20 ಲೀಗ್ಗಳಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಪೊಲಾರ್ಡ್ ತಮ್ಮ ನಿವೃತ್ತಿಯ ಬಗ್ಗೆ ತಿಳಿಸಿದ್ದಾರೆ.
“ನಾನು ಸಾಕಷ್ಟು ಯೋಚಿಸಿದ ನಂತರ ನಿವೃತ್ತಿಯ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಅನೇಕ ಕೆರಿಬಿಯನ್ ಯುವಕರಂತೆ, ನಾನು ಕೂಡ 10 ನೇ ವಯಸ್ಸಿನಿಂದ ವೆಸ್ಟ್ ಇಂಡೀಸ್ಗಾಗಿ ಆಡುವ ಕನಸು ಕಂಡೆ. ವೆಸ್ಟ್ ಇಂಡೀಸ್ ಪರ 15 ವರ್ಷಗಳ ಕಾಲ ಟಿ-20 ಮತ್ತು ಏಕದಿನದಲ್ಲಿ ಆಡಿರುವ ಹೆಮ್ಮೆ ನನಗಿದೆ” ಎಂದು ಪೊಲಾರ್ಡ್ ತಿಳಿಸಿದ್ದಾರೆ.
ಪೊಲಾರ್ಡ್ ಅವರು ತಮ್ಮ ವೃತ್ತಿಜೀವನದಲ್ಲಿ 101 T-20 ಅಂತಾರಾಷ್ಟ್ರೀಯ ಮತ್ತು 123 ODI ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ODI ಗಳಲ್ಲಿ, ಅವರು 26.01 ಸರಾಸರಿಯಲ್ಲಿ 2706 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಮತ್ತು 13 ಅರ್ಧಶತಕಗಳು ಸೇರಿವೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು 25.30ರ ಸರಾಸರಿಯಲ್ಲಿ 1569 ರನ್ ಗಳಿಸಿದ್ದಾರೆ. ಇದರಲ್ಲಿ 6 ಅರ್ಧಶತಕಗಳು ಸೇರಿವೆ. ಪೊಲಾರ್ಡ್ ಏಕದಿನದಲ್ಲಿ 55 ಮತ್ತು ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 42 ವಿಕೆಟ್ ಪಡೆದಿದ್ದಾರೆ.
ಪೊಲಾರ್ಡ್ ಅವರನ್ನು 2019 ರಲ್ಲಿ ವೆಸ್ಟ್ ಇಂಡೀಸ್ ODI ಮತ್ತು T20 ತಂಡದ ನಾಯಕರನ್ನಾಗಿ ನೇಮಕ ಮಾಡಿತು. 2021ರ ಟಿ-20 ವಿಶ್ವಕಪ್ನಲ್ಲಿ ಕೆರಿಬಿಯನ್ ತಂಡದ ನಾಯಕರಾಗಿಯೂ ಕಾಣಿಸಿಕೊಂಡಿದ್ದರು. ಆದರೆ, ತಂಡ ಸೆಮಿಫೈನಲ್ ತಲುಪಲು ಸಾಧ್ಯವಾಗಿರಲಿಲ್ಲ. ಪೊಲಾರ್ಡ್ ಪ್ರಸ್ತುತ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ.