ಮಾರ್ಚ್ 5ಕ್ಕೆ ಬಜೆಟ್ ಮಂಡನೆ ಮಾಡುವುದು ನಿಶ್ಚಿತವಾಗಿದೆ. ಹೀಗಾಗಿ ಪೂರ್ವಭಾವಿ ತಯಾರಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ರಾಜ್ಯ ಬಜೆಟ್ ಕುರಿತು ಮಾತನಾಡಿದ ಬಿಎಸ್ವೈ, ಎಂದಿನಂತೆ ಬಜೆಟ್ ನಲ್ಲಿ ನೀರಾವರಿ, ಕೃಷಿಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹಾಗೇ ಹಣಕಾಸಿನ ಇತಿಮಿತಿ ಒಳಗೆ ಬಜೆಟ್ ಮಂಡನೆ ಮಾಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ ಎಂದು ಬಿಎಸ್ವೈ ಹೇಳಿದ್ದಾರೆ.
ಇದೇ ವೇಳೆ ತಮ್ಮ ತವರು ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾತನಾಡಿದ ಸಿಎಂ, ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮಂಜೂರು ಆಗಿದೆ. ಜಿಲ್ಲೆಗೆ ಮತ್ತಷ್ಟು ಕೈಗಾರಿಕೆಗಳು ಬರಲು ವಿಮಾನ ನಿಲ್ದಾಣ ಆಗಬೇಕಿದೆ. ವಿಮಾನ ನಿಲ್ದಾಣಕ್ಕೆ ಸದ್ಯ ಕ್ಲಿಯರೆನ್ಸ್ ಸಿಕ್ಕಿದ್ದು, ಆದಷ್ಟು ಬೇಗ ಕಾಮಗಾರಿ ಕೆಲಸ ಪ್ರಾರಂಭವಾಗಲಿದೆ ಎಂದು ಹೇಳಿದ್ರು. ಇನ್ನು, ಸಿಗಂದೂರು ಸೇತುವೆ ಕೆಲಸವು ಶೀಘ್ರದಲ್ಲೇ ಪ್ರಾರಂಭ ಆಗುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ತೆರಿಗೆ ಹಣವನ್ನು ಕಡಿತಗೊಳಿಸಿರುವ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಬಿಎಸ್ವೈ, 15ನೇ ಹಣಕಾಸು ಹಂಚಿಕೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಕೊರತೆ ವಿಚಾರವಾಗಿ ಗಮನಹರಿಸಿ, ಮುಂದಿನ ಮೂರೂವರೆ ವರ್ಷದಲ್ಲಿ ಇನ್ನೂ ಅಭಿವೃದ್ಧಿ ಕೆಲಸಗಳನ್ನ ಮಾಡಲಾಗುತ್ತದೆ ಎಂದು ನೀಡಿದ್ರು..








