ಬೆಂಗಳೂರು : ರಾಜ್ಯ ಸರ್ಕಾರ ವಲಸೆ ಕಾರ್ಮಿಕರ ಕಷ್ಟ ಸುಖ ಕೇಳದೇ ನಿರ್ಲಕ್ಷ್ಯ ವಹಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಊರಿಗೆ ಹೊರಟ ಕಾರ್ಮಿಕರನ್ನು ಭೇಟಿ ಮಾಡಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಸುರಕ್ಷಿತವಾಗಿ ಊರಿಗೆ ತೆರಳಿ ಎಂದು ಧೈರ್ಯ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು ಊರಿಗೆ ಹೋಗಲು ಕಾಂಗ್ರೆಸ್ ಪಕ್ಷದಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಆದರೆ, ರಾಜ್ಯ ಸರ್ಕಾರದ ವತಿಯಿಂದ ಯಾರೂ ಕೂಡ ವಲಸೆ ಕಾರ್ಮಿಕರ ಸಂಕಷ್ಟವನ್ನು ಕೇಳಲು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಮಂತ್ರಿಗಳಿಗೆ ಕಣ್ಣು, ಕಿವಿ, ಹೃದಯವಿಲ್ಲ, ಇಂತಹ ಸಂಕಷ್ಟದ ಸಮಯದಲ್ಲಿ ವಲಸೆ ಕಾರ್ಮಿಕರ ಕಷ್ಟ ಕೇಳುತ್ತಿಲ್ಲ. 25 ಜನ ಬಿಜೆಪಿ ಸಂಸದರಿದ್ದರೂ ರಾಜ್ಯದ ಕಾರ್ಮಿಕರಿಗೆ ರೈಲಿನ ವ್ಯವಸ್ಥೆ ಮಾಡಿಲ್ಲ ಎಂದು ದೂರಿದರು.
ಇನ್ನು ಪ್ರಾಣ ಕೊಟ್ಟಾದರೂ, ನಮ್ಮ ಪಕ್ಷದ ಕಾರ್ಯಕರ್ತರು ವಲಸೆ ಕಾರ್ಮಿಕರ ಹಿತ ಕಾಯಲಿದ್ದಾರೆ ಎಂದು ಹೇಳಿದ್ದಾರೆ ಡಿ.ಕೆ.ಶಿವಕುಮಾರ್.