ಶಿವಮೊಗ್ಗ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸರ್ಕಾರದ ಜೊತೆ ವಿರೋಧ ಪಕ್ಷ ಕೈಜೋಡಿಸಬೇಕು. ಅಲ್ಲದೆ ರೋಗ ಬರದಂತೆ ತಡೆಗಟ್ಟಲು ಏನು ಮಾಡಬೇಕು ಎಂಬ ದಿಕ್ಕಿನಲ್ಲಿ ಯೋಚಿಸಬೇಕು. ಹಾಗೆಯೇ ಸಲಹೆ ಸೂಚನೆಗಳನ್ನು ಕೊಡಬೇಕು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವುದು ನಿಜ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೊನಾ ತಡೆಗಟ್ಟುವಲ್ಲಿ ಏನೇನು ಪ್ರಯತ್ನ ಮಾಡಬೇಕೋ ಅದನ್ನು ಮಾಡುತ್ತಿವೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು. ಆರೋಗ್ಯ ಇಲಾಖೆ ಕೊರೊನಾ ಕಿಟ್ ನಲ್ಲಿ ಹಗರಣ ಆಗಿದೆ ಎಂಬುದನ್ನು ಇಷ್ಟು ಹಗುರವಾಗಿ ಹೇಳಿ ಸರಿದುಕೊಳ್ಳಬಾರದು. ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ವಿರೋಧ ಪಕ್ಷ ಕೈಜೋಡಿಸಬೇಕು. ಭ್ರಷ್ಟಾಚಾರ ಆಗಿದೆ ಅಂತ ಅನ್ನಿಸಿದರೆ ಅಧಿಕಾರಿಗಳು ಬರಲಿ, ದಾಖಲೆ ಕೊಡ್ತೀನಿ ಅನ್ನುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು. ಅವರ ಬಳಿ ದಾಖಲೆ ಇದ್ದರೆ ತಕ್ಷಣ ಬಿಡುಗಡೆ ಮಾಡಲಿ ಎಂದ ಸವಾಲಾಕಿದ ಈಶ್ವರಪ್ಪ, ಯಾರು ಭ್ರಷ್ಟ ಅಧಿಕಾರಿ ಇದ್ದಾರೆ, ಭ್ರಷ್ಟ ಮಂತ್ರಿ ಇದ್ದಾರೆ ಅವರನ್ನು ರಾಜ್ಯ ಸರ್ಕಾರ ಇಟ್ಟುಕೊಳ್ಳಲ್ಲ. ಆದರೆ ಸುಮ್ಮನೆ ಗಾಳಿಯಲ್ಲಿ ಕಲ್ಲು ಹೊಡೆದಾಗೆ ಮಾಡೋದು ಸರಿಯಲ್ಲ. ಅವರ ಬಳಿ ದಾಖಲೆ ಇದ್ದರೆ ಕೊಡಲಿ ಎಂದರು.








