ಬೆಂಗಳೂರು, ಮೇ 22 : ಗ್ರಾಮ ಪಂಚಾಯಿತಿ ಚುನಾವಣೆ ಮುಂದಕ್ಕೆ ಹೋದ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ಹೊರಹಾಕಿದ್ದು, ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ ನಡೆಸದೆ ಬಿಜೆಪಿ ಹುನ್ನಾರ ನಡೆಸುತ್ತಿದೆ. ಸರ್ಕಾರ ಕೊರೊನಾ ನಡುವೆ ಗ್ರಾಮ ಪಂಚಾಯಿತಿ ಚುನಾವಣೆ ಮುಂದಕ್ಕೆ ಹಾಕಿ, ಅದರ ದುರುಪಯೋಗ ಮಾಡಿಕೊಳ್ಳುತ್ತಿದೆ. ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರ ಅಧಿಕಾರವಧಿ ಮುಗಿದಿದ್ದು, ಬಿಜೆಪಿ ಸದಸ್ಯರನ್ನ ನಾಮನಿರ್ದೇಶನ ಮಾಡುತ್ತಿದೆ ಎನ್ನುವ ಆರೋಪ ಜೋರಾಗಿದೆ. ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿಕೆಯನ್ನು ಕರ್ನಾಟಕ ಕಾಂಗ್ರೆಸ್ ಪಕ್ಷದ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಲಾಗಿದೆ.
”ರಾಜ್ಯ ಸರ್ಕಾರ ಈವರೆಗೂ ಪಂಚಾಯಿತಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳದೇ, ಬಿಜೆಪಿ ಸದಸ್ಯರನ್ನ ನಾಮನಿರ್ದೇಶನ ಮಾಡುವ ಹುನ್ನಾರ ನಡೆಸಿದೆ. ಪಂಚಾಯಿತಿಗಳಿಗೆ ಚುನಾವಣೆ ನಡೆಯಬೇಕು ಅಥವಾ ಇರುವ ಸಮಿತಿಗಳನ್ನೇ ಮುಂದುವರೆಸಬೇಕು. ಸಮಿತಿಗಳ ಮುಂದುವರೆಸದೇ ಇಲ್ಲವಾದರೆ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸಲಾಗುತ್ತದೆ” ಎಂದು ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ
ಗ್ರಾಮ ಪಂಚಾಯತ್ ಚುನಾವಣೆಗಳನ್ನ ಮುಂದೂಡದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ ಮಾಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಹೆಚ್.ಕೆ ಪಾಟೀಲ್, ಎಂಎಲ್ ಸಿ ಕೆ.ಸಿ.ಕೊಂಡಯ್ಯ ಸೇರಿ ಹಲವು ಮುಖಂಡರು ರಾಜ್ಯ ಚುನಾವಣಾ ಆಯುಕ್ತ ಬಿ.ಬಸವರಾಜುರನ್ನ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆಗಳನ್ನ ಮುಂದೂಡಬೇಡಿ. ಅವಧಿಗೆ ಸರಿಯಾಗಿ ಚುನಾವಣೆಗಳನ್ನ ನಡೆಸಿ, ಸರ್ಕಾರ ನಾಮ ನಿರ್ದೇಶನ ಮಾಡಲು ಅವಕಾಶ ನೀಡಬೇಡಿ. ಚುನಾವಣೆ ನಡೆಸದೆ ನಾಮನಿರ್ದೇಶನ ಮಾಡಬಾರದು ಎಂದು ಮನವಿ ಮಾಡಿದ್ದಾರೆ.








