ಬೆನ್ ಸ್ಟೋಕ್ಸ್ ಆಲ್ ರೌಂಡ್ ಆಟ… ಮ್ಯಾಂಚೆಸ್ಟರ್ ಟೆಸ್ಟ್ ನಲ್ಲಿ ಜಯ ಸಾಧಿಸಿದ ಆಂಗ್ಲರು
ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿದೆ. ಈ ಮೂಲಕ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು 1-1ರಿಂದ ಸಮಗೊಳಿಸಿದೆ. ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಸೋಲಿಗೆ ಆಂಗ್ಲರು ಪ್ರತಿಕಾರ ತೀರಿಸಿಕೊಂಡಿದ್ದಾರೆ. ಪಂದ್ಯದ ಐದನೇ ದಿನ ವೆಸ್ಟ್ ಇಂಡೀಸ್ ತಂಡದ ಬ್ಯಾಟ್ಸ್‍ಮೆನ್‍ಗಳು ಕ್ರೀಸ್‍ನಲ್ಲಿ ಭದ್ರವಾಗಿ ನಿಲ್ಲಲು ಇಂಗ್ಲೆಂಡ್ ವೇಗಿಗಳು ಅವಕಾಶವನ್ನೇ ನೀಡಲಿಲ್ಲ. ಪರಿಣಾಮ ವೆಸ್ಟ್ ಇಂಡೀಸ್ 113 ರನ್‍ಗಳಿಂದ ಇಂಗ್ಲೆಂಡ್‍ಗೆ ಶರಣಾಯಿತ್ತು.
ಪಂದ್ಯದ ಐದನೇ ದಿನ ಆರಂಭದಿಂದಲೇ ಬೆನ್ ಸ್ಟೋಕ್ಸ್ ಅವರು ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ರು. ಕೇವಲ 57 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‍ಗಳ ಸಹಾಯದಿಂದ ಅಜೇಯ 78 ರನ್ ಸಿಡಿಸಿದ್ರು. ಇನ್ನು ನಾಯಕ ಜಾಯ್ ರೂಟ್ 22 ರನ್ ಗಳಿಸಿ ರನೌಟಾದ್ರು. ಒಲಿವ್ ಪೊಪ್ ಅಜೇಯ 12 ರನ್ ದಾಖಲಿಸಿದ್ರು. ಅಂತಿಮವಾಗಿ ಇಂಗ್ಲೆಂಡ್ ತಂಡ ಮೂರು ವಿಕೆಟ್ ನಷ್ಟಕ್ಕೆ 129 ರನ್ ಗಳಿಗೆ ಎರಡನೇ ಇನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡಿತ್ತು.
ಗೆಲ್ಲಲು 312 ರನ್‍ಗಳ ಸವಾಲನ್ನು ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ವೇಗಿ ಸ್ಟುವರ್ಟ್ ಬ್ರಾಡ್ ಅವರು ಆಘಾತದ ಮೇಲೆ ಆಘಾತ ನೀಡಿದ್ರು. ಪಂದ್ಯವನ್ನು ಗೆಲ್ಲುವುದು ಅಸಾಧ್ಯ ಎಂದು ಗೊತ್ತಿದ್ರೂ ವೆಸ್ಟ್ ಇಂಡೀಸ್ ಕನಿಷ್ಠ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಸಹ ಇಂಗ್ಲೆಂಡ್ ಬೌಲರ್‍ಗಳು ಅವಕಾಶವನ್ನೇ ನೀಡಲಿಲ್ಲ. ಆರಂಭಿಕ ಕ್ರೇಗ್ ಬ್ರಾತ್ ವೇಟ್ 12 ರನ್, ಶಾಮ್ರಾಹ್ ಬ್ರೂಕ್ಸ್ 62 ರನ್ ಹಾಗೂ ಜೆರ್ಮಿನ್ ಬ್ಲ್ಯಾಕ್ ವುಡ್ 55 ರನ್ ಮತ್ತು ನಾಯಕ ಜೇಸನ್ ಹೋಲ್ಡರ್ 35 ರನ್‍ಗಳನ್ನು ದಾಖಲಿಸಿದ್ರು. ಇನ್ನುಳಿದ ವೆಸ್ಟ್ ಇಂಡೀಸ್ ಬ್ಯಾಟ್ಸ್ ಮೆನ್ ಗಳು ಒಂದಂಕಿ ಮೊತ್ತಕ್ಕೆ ಸೀಮಿತರಾದ್ರು.
ಅಂತಿಮವಾಗಿ ವೆಸ್ಟ್ ಇಂಡೀಸ್ 198 ರನ್‍ಗಳಿಗೆ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು ಹೀನಾಯ ಸೋಲು ಅನುಭವಿಸಿತ್ತು. ಇಂಗ್ಲೆಂಡ್‍ನ ವೇಗಿ ಸ್ಟುವರ್ಟ್ ಬ್ರಾಡ್ 42 ರನ್‍ಗೆ 3 ವಿಕೆಟ್ ಕಬಳಿಸಿ ಇಂಗ್ಲೆಂಡ್ ತಂಡದ ಗೆಲುವಿಗೆ ಸಹಕರಿಸಿದ್ರು. ಮೊದಲ ಟೆಸ್ಟ್ ಪಂದ್ಯದಿಂದ ಕೈಬಿಟ್ಟಿದ್ದಕ್ಕೆ ಸ್ಟುವರ್ಟ್ ಬ್ರಾಡ್ ಈ ಪಂದ್ಯದಲ್ಲಿ ತನ್ನ ಅನಿವಾರ್ಯತೆ ತಂಡಕ್ಕೆ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ನಿರೂಪಿಸಿದ್ರು. ಹಾಗೇ ಕ್ರಿಸ್ ವೋಕ್ಸ್, ಡಾಮಿನಿಕ್ ಬೇಸ್ ಮತ್ತು ಬೆನ್ ಸ್ಟೋಕ್ಸ್ ತಲಾ ಎರಡು ವಿಕೆಟ್ ಉರುಳಿಸಿದ್ರು.
ಇದಕ್ಕೂ ಮೊದಲು ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ 9 ವಿಕೆಟ್ ಕಳೆದುಕೊಂಡು ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಹಾಗೇ ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ ನಲ್ಲಿ 287 ರನ್ ದಾಖಲಿಸಿತ್ತು.
ಆಲ್‍ರೌಂಡ್ ಆಟವನ್ನಾಡಿದ್ದ ಬೆನ್ ಸ್ಟೋಕ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು. ಮೊದಲ ಟೆಸ್ಟ್ ನಲ್ಲಿ ನಾಯಕನಾಗಿದ್ದ ಸ್ಟೋಕ್ಸ್ ತಂಡಕ್ಕೆ ಗೆಲುವು ದಾಖಲಿಸಲಿಲ್ಲ. ಆದ್ರೆ ಒಬ್ಬ ಆಟಗಾರನಾಗಿ ಬೆನ್ ಸ್ಟೋಕ್ಸ್ ಅದ್ಭುತ ಪ್ರದರ್ಶನ ನೀಡಿ ಇಂಗ್ಲೆಂಡ್ ತಂಡದ ಮರ್ಯಾದೆ ಉಳಿಸಿದ್ರು.