ಬೆಂಗಳೂರು : ರಾಜ್ಯದಲ್ಲಿ ಇದುವರೆಗೆ ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೋವಿಡ್ ಚಿಕಿತ್ಸೆ ಪ್ರಾರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಚಿಕಿತ್ಸೆ ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸಚಿವರು ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೋನ ಪ್ರಕರಣಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕರೆದಿದ್ದ ಪರಾಮರ್ಶೆ ಸಭೆಯ ನಂತರ ಸಚಿವ ಸುಧಾಕರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪಿಪಿಇ ಕಿಟ್ ಮುಂತಾದ ಉಪಕರಣಗಳ ಖರೀದಿ ಕುರಿತಂತೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, MDA ಹಾಗು CE ಅನುಮೋದನೆ ದೊರಕಿರುವ ಅಂತರಾಷ್ಟ್ರೀಯ ಗುಣಮಟ್ಟದ ಉಪಕರಣಗಳನ್ನೇ ನಮ್ಮ ರಾಜ್ಯದಲ್ಲಿ ಖರೀದಿಸಲಾಗುತ್ತಿದ್ದು ಈ ಕುರಿತು ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು. ತಾವೇ ಖುದ್ದಾಗಿ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸುತ್ತಿರುವುದಾಗಿ ಸಚಿವರು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದೆಂದು ತಿಳಿಸಿದ ಡಾ.ಸುಧಾಕರ್, ಸರ್ಕಾರವೇ ಚಿಕಿತ್ಸಾ ದರ, ಪರೀಕ್ಷಾ ದರ ಮುಂತಾದವುಗಳನ್ನು ನಿಗದಿಪಡಿಸಲಿದ್ದು, ಸುಲಿಗೆ ಮಾಡುವ ಆಸ್ಪತ್ರೆಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ರಾಜ್ಯಾದ್ಯಂತ ಏಕರೂಪದ ಚಿಕಿತ್ಸಾದರ ನಿಗದಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ ಎಂದು ಅವರು ಹೇಳಿದರು. ಕೊರೋನ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಖಾಸಗಿ ವಲಯವೂ ಕೈಜೋಡಿಸಬೇಕಿದೆ ಎಂದು ಅವರು ಹೇಳಿದರು.
ಕೊರೋನ ಚಿಕಿತ್ಸೆಗೆ ವಿಮಾ ಸೌಲಭ್ಯ
ಕೊರೋನಗೆ ಚಿಕಿತ್ಸೆಯನ್ನೂ ABARK ಅಡಿಯಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರದ ಆರೋಗ್ಯ ಸಚಿವಾಲಯದ ಜೊತೆ ಶೀಘ್ರದಲ್ಲೇ ಮಾತುಕತೆ ನಡೆಸುವುದಾಗಿ ಸಚಿವರು ತಿಳಿಸಿದರು. ಇದರಿಂದ ಆರೋಗ್ಯ ವಿಮೆಯ ಅಡಿಯಲ್ಲಿ ಕೋವಿಡ್ ಚಿಕಿತ್ಸೆಯೂ ಸೇರಲ್ಪಡುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಜನಸಾಮಾನ್ಯರಿಗೂ ಚಿಕಿತ್ಸೆಗೆ ಅನುಕೂಲ ಆಗಲಿದೆ ಎಂದು ಅವರು ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಾಸ್ಕ್ ಧರಿಸುವುದರಿಂದ 90% ಸೋಂಕು ತಡೆಗಟ್ಟಬಹುದಾಗಿದೆ. ಆದ್ದರಿಂದ ಎಲ್ಲರೂ ಕಡ್ಡಾಯ ಮಾಸ್ಕ್ ಧರಿಸಬೇಕು ಎಂದು ಸಚಿವರು ತಾಕೀತು ಮಾಡಿದರು. ಸರ್ಕಾರದ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕು. ಮದುವೆ ಮುಂತಾದ ಸಮಾರಂಭಗಳಿಗೂ ನೀಡಲಾಗಿರುವ ಮಾರ್ಗಸೂಚಿಗಳ ಪಾಲನೆ ಆಗಬೇಕು ಎಂದು ಅವರು ಹೇಳಿದರು.
ಮಾಧ್ಯಮಗಳ ಪಾತ್ರ
ಕೊರೋನ ಕುರಿತಾಗಿ ಜನರಲ್ಲಿ ಇರುವ ಆತಂಕವನ್ನು ದೂರಮಾಡಿ ನೈಜ ಅಂಶಗಳನ್ನು ತೋರಿಸುವಂತೆ ಸಚಿವರು ಮಾಧ್ಯಮಗಳಿಗೆ ಮನವಿ ಮಾಡಿದರು. ಬೆಂಗಳೂರಿನಲ್ಲಿ ಸುಮಾರು 697 ಜನ ಸೋಂಕಿತರಲ್ಲಿ ಈಗ 330 ಸಕ್ರಿಯ ಪ್ರಕರಣಗಳಿವೆ. ಅದರಲ್ಲೂ ಐಸಿಯು ನಲ್ಲಿ ಕೇವಲ 6 ಜನ ಮಾತ್ರ ಇದ್ದಾರೆ. 93% ಜನರಿಗೆ ಯಾವುದೇ ಲಕ್ಷಣಗಳಿಲ್ಲ. ಕೊರೋನ, ಸಾರ್ಸ್ ವೈರಾಣುವಿಗಿಂತ ಅಪಾಯಕಾರಿ ಅಲ್ಲ. ಮರಣ ಪ್ರಮಾಣ ನಮ್ಮ ರಾಜ್ಯದಲ್ಲಿ ಕೇವಲ 1.2% ನಷ್ಟಿದೆ. ರಾಷ್ಟ್ರೀಯ ಸರಾಸರಿ 2.8% ನಷ್ಟಿದೆ. ಸಾರ್ಸ್ ಸೋಂಕಿನ ಮರಣ ಪ್ರಮಾಣ ಶೇ.10% ಇತ್ತು. ಆದ್ದರಿಂದ ಹರಡುವಿಕೆ ಪ್ರಮಾಣ ಹೆಚ್ಚಾಗಿದೆ ಎನ್ನುವುದನ್ನು ಬಿಟ್ಟರೆ ಇದು ಇತರೆ ವೈರಾಣುಗಳಿಗಿಂತ ಕಡಿಮೆ ಅಪಾಯಕಾರಿಯಾಗಿದೆ. ಆದ್ದರಿಂದ, ಮಾಧ್ಯಮದವರು ಜನರಲ್ಲಿ ಆತಂಕ ಸೃಷ್ಟಿಸುವ ಬದಲು ತೀವ್ರತೆ ಕುರಿತಾದ ಅಂಕಿ ಅಂಶಗಳ ಮೂಲಕ ಜಾಗೃತಿ ಮೂಡಿಸುವಂತೆ ಹಾಗೂ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಅರಿವು ಮೂಡಿಸಲು ಸಚಿವ ಸುಧಾಕರ್ ಮನವಿ ಮಾಡಿದರು