ಸೋಮಾಲಿಯಾ ದೇಶದ ಮೊಗಾದಿಶುವಿನ ಬೀಚ್ ಹೋಟೆಲ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, 32 ಜನ ಸಾವನ್ನಪ್ಪಿ, 63 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಅಲ್-ಖೈದಾದ ಪೂರ್ವ ಆಫ್ರಿಕಾದ ಅಂಗಸಂಸ್ಥೆ ಅಲ್-ಶಬಾಬ್ ತನ್ನ ರೇಡಿಯೋ ಸ್ಟೇಷನ್ ಮೂಲಕ ತನ್ನ ಹೋರಾಟಗಾರರು ದಾಳಿ ನಡೆಸಿದ್ದಾರೆ ಎಂದು ತಿಳಿಸಿದೆ. ಈ ದಾಳಿಯಲ್ಲಿ ಓರ್ವ ಯೋಧ ಸಾವನ್ನಪ್ಪಿದ್ದು, ಉಳಿದವರು ನಾಗರಿಕರು ಎಂದು ಪೊಲೀಸ್ ವಕ್ತಾರ ಮೇಜರ್ ಅಬ್ದಿಫತಾ ಆದಾನ್ ಹಸನ್ ಮಾಹಿತಿ ನೀಡಿದ್ದಾರೆ.
ಅಲ್ಲದೇ, ದಾಳಿಯಲ್ಲಿ ಮತ್ತೊಬ್ಬ ಯೋಧ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೊಮಾಲಿಯಾದಲ್ಲಿ ಅಂತಾರಾಷ್ಟ್ರೀಯ ಬೆಂಬಲ ಪಡೆದಿರುವ ಫೆಡರಲ್ ಸರ್ಕಾರದ ವಿರುದ್ಧ ಬಂಡೆದ್ದಿರುವ ಅಲ್ ಖೈದಾದ ಜತೆ ಸಂಪರ್ಕವಿರುವ ಅಲ್-ಶದಾಬ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಓರ್ವ ಪ್ರತ್ಯಕ್ಷದರ್ಶಿ ಆತ್ಮಾಹುತಿ ಬಾಂಬ್ ದಾಳಿಗೆ ಒಳಗಾದ ವ್ಯಕ್ತಿ ತನ್ನನ್ನು ತಾನು ಸ್ಫೋಟಿಸಿಕೊಳ್ಳುವುದಕ್ಕೂ ಮುನ್ನ ಸ್ಫೋಟಕ ಉಡುಪು ಧರಿಸಿಕೊಳ್ಳುವುದನ್ನು ನಾನು ನೋಡಿದ್ದೇನೆ ಎಂದು ಹೇಳಿದ್ದಾರೆ.
ಹೋಟೆಲ್ನಲ್ಲಿ ಅವರೊಂದಿಗಿದ್ದ ಕೆಲವು ಸ್ನೇಹಿತರು ಸಾವನ್ನಪ್ಪಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ. ಕಳೆದ ವರ್ಷ ಕೂಡ ಇಂತಹ ಘಟನೆಯೊಂದು ನಡೆದಿತ್ತು. ಆ ವೇಳೆ 9 ಜನರು ಸಾವನ್ನಪ್ಪಿದ್ದರು.








