ಐಪಿಎಲ್ 2021- ಕೊನೆಗೂ ಗೆಲುವಿನ ರುಚಿ ಕಂಡ ಎಸ್ ಆರ್ ಎಚ್…ಪಂಜಾಬ್ ಕಿಂಗ್ಸ್ ಮೂರನೇ ಸೋಲು
ಸನ್ ರೈಸರ್ಸ್ ಹೈದ್ರಬಾದ್ ತಂಡ ಕೊನೆಗೂ ಗೆಲುವಿನ ರುಚಿ ಕಂಡಿದೆ. ಸತತ ಮೂರು ಸೋಲುಗಳಿಂದ ಕಂಗೆಟ್ಟಿದ್ದ ಎಸ್ ಆರ್ ಎಚ್ ತಂಡ ತನ್ನ ನಾಲ್ಕನೇ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. ಅಲ್ಲದೆ ಈ ಒಂದು ಗೆಲುವಿನ ಮೂಲಕ ಅಂಕ ಪಟ್ಟಿಯಲ್ಲೂ ರನ್ ಆಧಾರದಲ್ಲಿ ಐದನೇ ಸ್ಥಾನಕ್ಕೇರಿದೆ.
14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಎಸ್ ಆರ್ ಎಚ್ ತಂಡ 9 ವಿಕೆಟ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿತ್ತು. ಈ ಸೋಲಿನೊಂದಿಗೆ ಮೂರನೇ ಸೋಲು ಅನುಭವಿಸಿದ್ದ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಸದ್ಯ ಕೊನೆಯ ಸ್ಥಾನದಲ್ಲಿದೆ.
ಚೆನ್ನೈ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.. ಆದ್ರೆ ಪಂಜಾಬ್ ಕಿಂಗ್ಸ್ ತಂಡದ ಲೆಕ್ಕಚಾರ ಆರಂಭದಲ್ಲೇ ಎಸ್ ಆರ್ ಎಚ್ ಬೌಲರ್ ಗಳು ಬುಡಮೇಲು ಮಾಡಿದ್ರು.
ಭುವನೇಶ್ವರ್ ಕುಮಾರ್, ಖಲೀಲ್ ಅಹಮ್ಮದ್ ಮತ್ತು ಸಿದ್ಧಾರ್ಥ್ ಕೌಲ್ ಅವರ ಮಿಂಚಿನ ದಾಳಿಗೆ ಪಂಜಾಬ್ ಕಿಂಗ್ಸ್ ಬ್ಯಾಟ್ಸ್ ಮೆನ್ ಗಳು ಹೆಚ್ಚು ಸಮಯ ಕ್ರೀಸ್ ನಲ್ಲಿ ನಿಲ್ಲಲಿಲ್ಲ.
Sunrisers Hyderabad end their losing run and register their first win in IPL 2021.
ಪರಿಣಾಮ ಪಂಜಾಬ್ ಕಿಂಗ್ಸ್ ತಂಡ 19.4 ಓವರ್ ಗಳಲ್ಲಿ 120 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಪಂಜಾಬ್ ಪರ ಮಯಾಂಕ್ ಅಗರ್ ವಾಲ್ 22ರನ್, ಶಾರೂಕ್ ಖಾನ್ 22 ರನ್, ದೀಪಕ್ ಹೂಡ 13 ರನ್ ಹಾಗೂ ಮೋಯಿಸಸ್ ಹೆನ್ಸಿಕ್ಸ್ 14 ರನ್ ಗಳಿಸಲಷ್ಟೇ ಶಕ್ತರಾದ್ರು. ಇನ್ನುಳಿದ ಬ್ಯಾಟ್ಸ್ ಮೆನ್ ಗಳು ಒಂದಂಕಿ ರನ್ ಗೆ ಸೀಮಿತತವಾದ್ರು.
ಭುವನೇಶ್ವರ್ ಕುಮಾರ್ ಮತ್ತು ಸಿದ್ಧಾರ್ಥ್ ಕೌಲ್ ತಲಾ ಎರಡು ವಿಕೆಟ್ ಪಡೆದ್ರೆ, ಖಲೀಲ್ ಅಹಮ್ಮದ್ ಮೂರು ವಿಕೆಟ್ ಉರುಳಿಸಿದ್ರು.
ಸುಲಭ ಸವಾಲನ್ನು ಬೆನ್ನಟ್ಟಿದ್ದ ಎಸ್ ಆರ್ ಎಚ್ ತಂಡಕ್ಕೆ ಡೇವಿಡ್ ವಾರ್ನರ್ ಮತ್ತು ಜಾನಿ ಬೇರ್ ಸ್ಟೋವ್ ಮೊದಲ ವಿಕೆಟ್ ಗೆ 10.1 ಓವರ್ ಗಳಲ್ಲಿ 73 ರನ್ ಕಲೆ ಹಾಕಿದ್ರು. ಡೇವಿಡ್ ವಾರ್ನರ್ 37 ರನ್ ಗೆ ತನ್ನ ಹೋರಾಟವನ್ನು ಮುಗಿಸಿದ್ರು.
ಇನ್ನೊಂದೆಡೆ ಜಾನಿ ಬೇರ್ ಸ್ಟೋವ್ 56 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ ಅಜೇಯ 63 ರನ್ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಕೇನ್ ವಿಲಿಯಮ್ಸನ್ ಅವರು ಅಜೇಯ 16 ರನ್ ಗಳಿಸಿದ್ರು.