ಸಿರಿವಂತ ರಾಷ್ಟ್ರ ಅಮೇರಿಕಾದಲ್ಲೂ ಇದೆ ಕುಗ್ರಾಮ : Marjala manthana

1 min read

ಸಿರಿವಂತ ರಾಷ್ಟ್ರ ಅಮೇರಿಕಾದಲ್ಲೂ ಇದೆ ಕುಗ್ರಾಮ ; ಈ ಸುಪೈ ವಿಲೇಜ್ ನಲ್ಲಿ ಯಾವ ಮೂಲಸೌಕರ್ಯಗಳೂ ಇಲ್ಲ ಆದರೂ ಪ್ರವಾಸಿ ತಾಣವಿದು: Marjala manthana

ಪ್ರಪಂಚದ ಬಲಾಢ್ಯ ರಾಷ್ಟ್ರ ಅಮೇರಿಕಾದ ಮೂಲೆಯಲ್ಲಿದೆ ಒಂದು ವಿಸ್ಮಯಕಾರಿ ಗ್ರಾಮ. ಈ ದೂರದ ಹಳ್ಳಿ, ಸಣ್ಣ,ಹಿಂದುಳಿದ ದುರ್ಗಮ ಕುಗ್ರಾಮ. ಈಗ್ರಾಮ ತಲುಪಲು ಅಡ್ವೆಂಚರಸ್ ಚಾರಣ ಮಾಡಬೇಕು. ಪ್ರಪಂಚದ ಎಲ್ಲಾ ರಾಷ್ಟ್ರಗಳ ಪ್ರವಾಸಿಗರನ್ನು ಸೆಳೆಯುವ ಹಳ್ಳಿ ಇದು.

ಗ್ರಾಂಡ್ ಕೆನಾನ್ ವ್ಯಾಪ್ತಿಯ ಆ ಗ್ರಾಮ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕುಗ್ರಾಮವಾದರೂ ರಮಣೀಯ ಪ್ರಕೃತಿಸೌಂದರ್ಯದ ನಡುವಿರುವ ಹಳ್ಳಿ. ಕೌಟುಂಬಿಕ ವ್ಯವಸ್ಥೆ ಅಸಮತೋಲನಗೊಂಡಿದ್ರೂ ಆ ಮಂದಿ ಆ ಹಳ್ಳಿ ಬಿಟ್ಟು ಬರಲು ಒಲ್ಲರು. ಬೆರಳೆಣಿಕೆಯ ಜನರಿದ್ರೂ ಸ್ವಾಭಿಮಾನಿಗಳಾಗಿ ಬದುಕ್ತಿದ್ದಾರೆ ಸುಪೈಯನ್ನರು. ಎಲ್ಲದಕ್ಕಿಂತ ಮುಖ್ಯವಾಗಿ ಆ ಪ್ರದೇಶ ಚಾರಣಕ್ಕೆ ಹಾಗೂ ಪ್ರಾಕೃತಿಕ ಅದ್ಭುತ ಭೂದೃಶ್ಯಕ್ಕೆ ಖ್ಯಾತವಾಗಿದೆ.

ಸುಪೈ ಅಥವಾ ಹವಾಸುಪೈ ಎಂದು ಕರೆಯಲಾಗುವ ಈ ಪುಟ್ಟ ಗ್ರಾಮವನ್ನು ಅಮೇರಿಕಾದಂತಹ ಹಿರಿಯಣ್ಣನ ನಾಡಿನ ಕುಗ್ರಾಮ ಅಂತ ಕರೆದ್ರೆ ತಪ್ಪಿಲ್ಲ. ಯಾಕಂದ್ರೆ ಇಲ್ಲಿಯಾವುದೇ ಮೂಲಸೌಕರ್ಯಗಳಿಲ್ಲ, ರಸ್ತೆಗಳಿಲ್ಲ ಇತರೆ ವ್ಯವಸ್ಥೆಗಳಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದ್ರೆ ಇದ್ಯಾವುದನ್ನು ಇಲ್ಲಿ ಒದಗಿಸಿಕೊಡುವುದೂ ಸಾಧ್ಯವಿಲ್ಲ. ಯಾಕಂದ್ರೆ ಪ್ರಾಕೃತಿಕವಾಗಿ ಅತ್ಯಂತ ದುಸ್ತರವಾದ ದುರ್ಬರವಾದ ಗಿರಿಕಣಿವೆಯ ನಡುವೆ ಇದೆ ಸುಪೈ.

ಗ್ರಾಂಡ್ ಕೆನಾನ್ ನ್ಯಾಷನಲ್ ಪಾರ್ಕ್, ಅಮೇರಿಕಾದ ಕೆಂಪುಮಣ್ಣಿನ ಗಿರಿಕಂದರಗಳಿಂದಾವೃತವಾದ ಸುಂದರ ಪ್ರದೇಶ.. ಗ್ರಾಂಡ್ ಕೆನಾನ್ ವ್ಯಾಪ್ತಿಯಲ್ಲಿದೆ ಸುಪೈ ಹಳ್ಳಿ. ಯುಎಸ್ಎ ಖಂಡದ ಕೋಕೋನಿನೋ ದೇಶದ ಅರಿಜುನಾ ಪ್ರಾಂತ್ಯದ ಆಡಳಿತ ವ್ಯಾಪ್ತಿಗೆ ಒಳಪಟ್ಟಿದೆ ಅಪರೂಪದ ಹಾಗೂ ವಿಸ್ಮಯಕಾರಿ ಹಳ್ಳಿ ಸುಪೈ.

 Marjala manthana

2010ರ ಜನಸಂಖ್ಯೆಯ ಅನ್ವಯ ಇಲ್ಲಿ ಸುಮಾರು 43 ಕುಟುಂಬಗಳ 208 ಜನ ವಾಸಿಸ್ತಿದ್ದಾರೆ. ಈಗ ಜನಸಂಖ್ಯೆ ಪ್ರಮಾಣ ಕೊಂಚ ಹೆಚ್ಚು ಕಡಿಮೆ ಆಗಿರಬಹುದಾದ್ರೂ ಇಲ್ಲಿನ ಜೀವನ ಶೈಲಿಯಲ್ಲಿ ಮಾತ್ರ ಯಾವ ಬದಲಾವಣೆಯೂ ಸಾಧ್ಯವಿಲ್ಲ.

ಅಮೇರಿಕಾದ ಆಡಳಿತವೇ ಈ ಸುಪೈ ಗ್ರಾಮವನ್ನು ದಿ ಮೋಸ್ಟ್ ರಿಮೋಟ್ ವಿಲೇಜ್ ಅಥವಾ ಅತ್ಯಂತ ದೂರದ ಹಳ್ಳಿ ಅಂತ ಕರೆದಿದೆ. ಇದು ಸಾಮಾನ್ಯ ನಾಗರೀಕ ಪ್ರಪಂಚದ ವಹಿವಾಟುಗಳಿಗಿಂತ ಭಿನ್ನ ಹಾಗಾಗಿ ಇದು ಅಮೇರಿಕನ್ನರಿಗೆ ದೂರ ಬಹು ದೂರ. ಸುಪೈಗೆ ಹತ್ತಿರವಿರುವ ಒಂದು ರಸ್ತೆ ತಲುಪಲು ಕನಿಷ್ಟ 13 ಕಿಲೋಮೀಟರ್ ಕ್ರಮಿಸಬೇಕು.

ಸುಪೈ ತಲುಪಲು ಹ್ವಾಲಪೈ ಗಿರಿಶಿಖರದ ಮೂಲಕ ಚಾರಣಮಾಡಬೇಕು. ನಡೆದು ಸಾಗಬೇಕು ಅಥವಾ ಕುದುರೆಗಳ ಸಹಾಯದಿಂದ ಹೋಗಬೇಕು. ಅಥವಾ ಹೆಲಿಕಾಪ್ಟರ್​ ಮೂಲಕ ಬರುವುದಿದ್ದರೂ ಹ್ವಾಲಾಪೈ ಏರ್​ಬೇಸ್​ ಮೂಲಕ ಸುಪೈಗೆ ಹೋಗಬಹುದು. ಇಲ್ಲಿನ ಸಮೀಪದ ರಸ್ತೆ ಪೀಚ್ ಸ್ಪ್ರಿಂಗ್​ನ ಬಿಐಎ ರೋಡ್. ಈ ಪೀಚ್ ಸ್ಪ್ರಿಂಗ್ಸಹ ಗ್ರಾಂಡ್ ಕೆನಾನ್​ ಪ್ರದೇಶದ ವ್ಯಾಪ್ತಿಯಲ್ಲೇ ಇದೆ.

Marjala manthana

ಸುಪೈ ತಲುಪಬೇಕೆಂದರೆ ಯಾವುದೇ ವಾಹನಗಳ ಸೌಲಭ್ಯವಿಲ್ಲ. ಇಲ್ಲಿ ಈಗಲೂ ಸರಕು, ಸಾಮಾನು ಸರಂಜಾಮು ಹಾಗೂ ಅಂಚೆ ಟಪಾಲು ಸಾಗಾಣಿಕೆಗೆ ಬಳಸುವುದು ಮ್ಯೂಲ್ ಅಂತ ಕರೆಯಲಾಗುವ ಒಂದು ಜಾತಿಯ ಗಿಡ್ಡನೆಯ ಕುದುರೆಗಳನ್ನು. ಜನಸಂಚಾರಕ್ಕೂ ಈ ಕುಳ್ಳಕುದುರೆಗಳೇ ವಾಹಕಗಳು ಅಥವಾ ಆಗಾಗಬಂದು ಹೋಗುವ ಹೆಲಿಕಾಪ್ಟರ್​ ಮೂಲಕ ಸುಪೈ ಸಂಪರ್ಕ ಸಾಧ್ಯವಷ್ಟೆ. ಇವೆರಡೂ ಇಲ್ಲದಿದ್ದರೆ ನಿಮ್ಮ ಪಾದಗಳೇ ಗತಿ. ಸುಪೈಗೆ ಕುದುರೆಗಳ ಮೇಲೆ ಆಹಾರ ಪದಾರ್ಥ ಹಾಗೂ ಇತರೆ ಸಾಮಗ್ರಿಗಳನ್ನು ಹೇರಿಕೊಂಡು ಬಂದು ಹಳ್ಳಿಗರಿಗೆ ಒದಗಿಸಲಾಗುತ್ತದೆ.

ಸಮುದ್ರ ಮಟ್ಟದಿಂದ 974 ಮೀಟರ್ ಎತ್ತರದಲ್ಲಿರುವ ಸುಪೈ ಗ್ರಾಮ 4.4 ಚದರ ಕಿಲೋಮೀಟರ್ ವಿಸ್ತಾರದಲ್ಲಿ ಹರಡಿಕೊಂಡಿದೆ.. ಇಲ್ಲಿನ ಕುಟುಂಬ ವ್ಯವಸ್ಥೆಯ ಗೋಳುಹೇಳತೀರದ್ದು. ಹಿಂದಿನ ಗಣತಿಯಲ್ಲಿ ಬಹಿರಂಗವಾಗಿದ್ದ ಸಂಗತಿ ಅಂದ್ರೆ ಶೇ 34ರಷ್ಟು ಸಂಸಾರಗಳು ಇಲ್ಲಿವೆ. ಶೇ 32ರಷ್ಟು ಮಹಿಳೆಯರಿದ್ದಾರೆ ಇನ್ನೂ ಮದುವೆಯಾಗಿಲ್ಲ. ಶೇ 14ರಷ್ಟು ಪುರುಷರು ಅವಿವಾಹಿತರಾಗಿ ಉಳಿದುಕೊಂಡಿದ್ದಾರೆ. ಇನ್ನುಳಿದ ಪ್ರಮಾಣದಲ್ಲಿ ಅನಾಥರು, ಕುಟುಂಬವಿಲ್ಲದವರು, ವೃದ್ಧರು, ಮಕ್ಕಳು ಇಲ್ಲಿದ್ದಾರೆ. ಇಲ್ಲಿನ ಹೆಣ್ಣು ಮಕ್ಕಳು ಹೊರ ಪ್ರಪಂಚಕ್ಕೆ ಹೋಗಲು ಇಚ್ಛಿಸುವುದಿಲ್ಲ ಹಾಗಾಗಿ ಅವರಿಗೆ ಮದುವೆಯಾಗ್ತಿಲ್ಲ. ಸುಪೈನಂತಹ ದೂರದ ಒಂಟಿ ಕುಗ್ರಾಮದ ಯುವಕರಿಗೆ ಯಾರು ತಾನೇ ಹೆಣ್ಣು ಕೊಟ್ಟು ಮದುವೆ ಮಾಡ್ತಾರೆ.

ಯುನೈಟೆಡ್ ಸ್ಟೇಟ್ಸ್ನ 48 ರಾಜ್ಯಗಳಲ್ಲೇ ಅತ್ಯಂತ ಹಿಂದುಳಿದ ಸಣ್ಣ ಹಾಗೂ ದೂರದ ಏಕೈಕ ಗ್ರಾಮ ಈ ಸುಪೈ. ಹಾಗಂತ ಇದು ನಿರ್ಲಕ್ಷಕ್ಕೀಡಾದ ಹಳ್ಳಿಯೇನಲ್ಲ. ವರ್ಷದ ಬಹುತೇಕ ದಿನಗಳು ಇಲ್ಲಿ ಪ್ರವಾಸಿಗರುತುಂಬಿಕೊಂಡಿರುತ್ತಾರೆ.

ಗ್ರಾಂಡ್ ಕೆನಾನ್ ಪ್ರಾಕೃತಿಕ ವೈಭವವನ್ನು ಕಣ್ತುಂಬಿಕೊಳ್ಳಲು ವಿಶ್ವದ ಬೇರೆ ಬೇರೆ ಕಡೆಗಳಿಂದ ಬರುವ ಪ್ರವಾಸಿಗರು ಸುಪೈನಲ್ಲಿ ಒಂದಿನ ತಂಗಿದ್ದು ಹೋಗ್ತಾರೆ. ಸುಪೈ ಎಷ್ಟೇ ಕುಗ್ರಾಮದಂತಿದ್ರೂ ಇಲ್ಲಿನ ಸಹಜ ವಾತಾವರಣ ಹಾಗೂ ನಿಸರ್ಗವೇ ಸೃಷ್ಟಿಸಿಕೊಂಡಿರುವ ರಮಣೀಯ ದೃಶ್ಯವೈಭವ ಅನನ್ಯ. ಸುಪೈ ಈ ಕಾರಣದಿಂದಲೇ ವಿಶ್ವದ ಎಲ್ಲಾ ರಾಷ್ಟ್ರಗಳ ಅಡ್ವೆಂಚರಸ್ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತದೆ.

ಸುಪೈ ಹಳ್ಳಿ ಇರುವ ಗ್ರಾಂಡ್​ ಕೆನಾನ್​ ನ್ಯಾಷನಲ್ ಪಾರ್ಕ್​ನಲ್ಲಿ ಸುಪೈಗೆ ಕೆಲವೆ ಕೂಗಳತೆಯ ದೂರದಲ್ಲಿದೆ ಮನಮೋಹಕ ಹವಾಸು ಜಲಪಾತ. ಇದರ ಒನಪು ವಯ್ಯಾರ ಹಾಗೂ ಭೋರ್ಗರೆತವನ್ನು ಇಷ್ಟಪಡದವನು ಅರಸಿಕನೇ ಸರಿ. ಹ್ವಾಲಾಪೈ ಹವಾಸುಪೈ ಗಿರಿಕಂದರಗಳ ಕಡಿದಾದ ದಾರಿಯಲ್ಲಿ ಚಾರಣ ಮಾಡುತ್ತ, ಹವಾಸು ಜಲಪಾತದಲ್ಲಿ ಸ್ವಚ್ಛಂದ ಜಲಕ್ರೀಡೆಯಾಡಿ, ಮೋಟು ಕುದುರೆಗಳ ಮೇಲೆ ಕುಳಿತು ಸುಪೈಗೆ ಬಂದರೆ ಒಂದು ನೆಮ್ಮದಿಯಾದ ವಿಶ್ರಾಂತಿಗೆ ಸುಪೈನ ಪ್ರವಾಸಿ ತಾಣಗಳು ಸಿದ್ಧವಾಗಿರುತ್ತವೆ. ಪ್ರತೀ ವರ್ಷ ಸುಪೈಗೆ 30 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ಕೊಡ್ತಿದ್ದಾರೆ ಅನ್ನುತ್ತವೆ ಕೆಲವು ಮೂಲಗಳು.

Marjala manthana

ಇಲ್ಲಿ ಲಭ್ಯವಿರುವ ಭಾರದಾತುಗಳಿಂದ ಇಲ್ಲಿ ಮನೆಗಳನ್ನು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸುಪೈನ ಸಾಲು ಸಾಲು ಮನೆಗಳ ಜೊತೆ ಜನರಲ್ ಸ್ಟೋರ್, ಕೆಫೆ, ಅಂಚೇ ಕಚೇರಿ, ಪ್ರಾಥಮಿಕ ಶಾಲೆ, ವಸತಿ ನಿಲಯಗಳು ಹಾಗೂ ಎರಡು ಚರ್ಚ್ಗಳೂ ಸಹ ಇವೆ. ಸುಪೈನ ಜನ, ಲಭ್ಯ ಇರುವ ಸೌಕರ್ಯದಲ್ಲಿ ಹಾಗೂ ನೀರಿನ ಲಭ್ಯತೆಯ ಸಹಾಯದಿಂದ ಸಣ್ಣ ಪ್ರಮಾಣದಲ್ಲಿ ಕೃಷಿ ಮಾಡುತ್ತಾರೆ. ಬೇಳೆ, ಕಾಳು, ಧಾನ್ಯಗಳು ಹಾಗೂ ಬೀನ್ಸ್ ನಂತಹ ತರಕಾರಿಗಳನ್ನು ಬೆಳೆಯುತ್ತಾರೆ.

ಹಾಗೆಯೇ ತಮ್ಮ ಪೂರ್ವಜರಂತೆ ಸುರುಳಿಯಾಕಾರದ ಬುಟ್ಟಿಗಳನ್ನು ನೇಯುತ್ತಾರೆ. ಕಳೆದ ಒಂದು ಸಾವಿರ ವರ್ಷದಿಂದಲೂ ಗ್ರಾಂಡ್ ಕೆನಾನ್ ಹಾಗೂ ಹ್ವಾಲಾಪೈ ಕೆಂಪು ಶಿಲಾ ಹೊದಿಕೆ ಪರ್ವತ ಶ್ರೇಣಿ ಹೀಗೆಯೇ ಇದೆ; ಈ ಪ್ರದೇಶದ ಸುಪೈ ಹಳ್ಳಿಯೂ ದಶಕಗಳಿಂದ ಒಂದೇ ರೀತಿಯ ಜೀವನ ಶೈಲಿ ಅಳವಡಿಸಿಕೊಂಡು ಬದುಕುತ್ತಿದೆ.. ಇಲ್ಲಿನ ಜನರಿಗೆ ಈ ಪ್ರದೇಶದ ನಿಶ್ಯಬ್ಧ ಹಾಗೂ ಮೌನ ಅಭ್ಯಾಸವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಸುಪೈನ ಏಕತಾನವನ್ನು ಬಹುವಾಗಿ ಮೆಚ್ಚಿಕೊಳ್ತಾರೆ. ಹೀಗಾಗಿಯೇ ದುರ್ಗಮ ಪ್ರದೇಶದಲ್ಲಿದ್ರೂ ಸುಪೈನ ಮಂದಿಗೆ ಬದುಕು ದುರ್ಬರ ಎಂದು ಯಾವಾಗಲೂ ಅನ್ನಿಸಿಲ್ಲ.

ಸುಪೈಯನ್ನರು ನೂರಾರು ವರ್ಷಗಳಿಂದ ಒಂದೇ ರೀತಿಯಜೀವನಶೈಲಿಗೆ ಹೊಂದುಕೊಂಡು ಬದುಕುತ್ತಿದ್ದಾರೆ. ಮೂಲ ಸೌಕರ್ಯಗಳಿಲ್ಲದಿದ್ದರೂ ತಮ್ಮ ಬದುಕನ್ನು ಹಾಗೂ ಕೃಷಿಯನ್ನು ಸುಖವಾಗಿಯೇ ನಡೆಸ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ನೆಮ್ಮದಿಯ ಆತಿಥ್ಯ ಕೊಡುತ್ತಿದ್ದಾರೆ ಸುಪೈನ ಮಂದಿ. ನಮ್ಮಲ್ಲಿ ಎಲ್ಲವೂ ಇದ್ದರೂ ಕೊರಗುವ ಮಂದಿ ಸುಪೈಯನ್ನರನ್ನು ನೋಡಿ ಕಲಿಯಬೇಕಿದೆ.

-ವಿಭಾ (ವಿಶ್ವಾಸ್ ಭಾರದ್ವಾಜ್)

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd