Supermoon – ಇನ್ನೊಂದು ದಿನದಲ್ಲಿ ವರ್ಷದ ಅತಿದೊಡ್ಡ ಸೂಪರ್ ಮೂನ್ ವಿಕ್ಷಿಸಲು ಸಿದ್ಧರಾಗಿ…
ಇನ್ನೊಂದು ದಿನದಲ್ಲಿ ಆಕಾಶದಲ್ಲಿ ವಿಸ್ಮಯವನ್ನ ನೀವು ಕಣ್ತುಂಬಿಕೊಳ್ಳಬಹುದು. ವರ್ಷದ ಅತಿದೊಡ್ಡ ಸೂಪರ್ಮೂನ್ ಬುಧವಾರ (ಜುಲೈ 13) ರಂದು ಗೋಚರಿಸಲ್ಪಡುತ್ತದೆ. ಜುಲೈ 13ರಂದು ಮಧ್ಯಾಹ್ನ 2.38ಕ್ಕೆ ಸೂಪರ್ ಮೂನ್ ಗೋಚರಿಸಲಿದೆ ಎಂದು ನಾಸಾ ತಿಳಿಸಿದೆ.
ಭಾರತೀಯ ಕಾಲಮಾನದ ಪ್ರಕಾರ ಗುರುವಾರ (ಜುಲೈ 14) ಮಧ್ಯರಾತ್ರಿ 12.08ಕ್ಕೆ ಸೂಪರ್ ಮೂನ್ ಗೋಚರಿಸಲಿದೆ. ಮೂರು ದಿನಗಳ ಕಾಲ ಭೂಮಿಗೆ ಅತ್ಯಂತ ಸಮೀಪ ಬರುವ ಹುಣ್ಣಿಮೆಯ ಚಂದ್ರನನ್ನ ಕಾಣಬಹುದು. ಈ ಹುಣ್ಣಿಮೆಯನ್ನು ಬಕ್ ಸೂಪರ್ ಮೂನ್ ಅಥವಾ ಥಂಡರ್ ಮೂನ್ ಎಂದು ಕರೆಯಲಾಗುತ್ತದೆ.
ಏನಿದು ಸೂಪರ್ ಮೂನ್..ಭೂಮಿಯ ಸಮೀಪಕ್ಕೆ ಬಂದಾಗ ತನ್ನ ಕಕ್ಷೆಯಲ್ಲಿರುವ ಚಂದ್ರ ಪೂರ್ಣವಾಗಿ ಮತ್ತು ದೊಡ್ಡದಾಗಿ ಕಾಣಿಸುತ್ತಾನೆ. ಅದನ್ನೇ `ಸೂಪರ್ ಮೂನ್‘ ಎನ್ನುತ್ತಾರೆ. ಖಗೋಳಶಾಸ್ತ್ರಜ್ಞ ರಿಚರ್ಡ್ ನೊಲ್ಲೆ ಅವರು 1979 ರಲ್ಲಿ ಸೂಪರ್ ಮೂನ್ ಎಂಬ ಪದವನ್ನು ಮೊದಲು ಬಳಸಿದರು.
ಸೂಪರ್ ಮೂನ್ ವರ್ಷದಲ್ಲಿ ಮೂರು ಅಥವಾ ನಾಲ್ಕು ಬಾರಿ ಸಂಭವಿಸುತ್ತದೆ. ಚಂದ್ರನು ಭೂಮಿಯ ಸುತ್ತ ದೀರ್ಘವೃತ್ತದ ಕಕ್ಷೆಯಲ್ಲಿ ಸುತ್ತಲು ಒಟ್ಟು 27 ದಿನಗಳನ್ನು ತೆಗೆದುಕೊಳ್ಳುತ್ತದೆ. ಅದು ತಿರುಗಿ ಭೂಮಿಗೆ ಹತ್ತಿರ ಬಂದಾಗ ಆ ಸ್ಥಾನಕ್ಕೆ `ಪೆರಿಜಿ‘ ಎನ್ನುತ್ತಾರೆ.
ಈ ಸ್ಥಳವು ಭೂಮಿಯಿಂದ 3,63,300 ಕಿ.ಮೀ ದೂರದಲ್ಲಿದೆ. ಅಲ್ಲದೆ, ಚಂದ್ರನು ಭೂಮಿಯಿಂದ ದೂರದಲ್ಲಿರುವ ಬಿಂದುವನ್ನು `ಅಪೋಜಿ‘ ಎಂದು ಕರೆಯಲಾಗುತ್ತದೆ. ಇದು ಭೂಮಿಯಿಂದ 4,05,500 ಕಿ.ಮೀ ದೂರದಲ್ಲಿರುತ್ತದೆ.