ಕೇಜ್ರಿವಾಲ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಂಗಳಾರತಿ
ನವದೆಹಲಿ: ಕೊರೊನಾ ರೋಗಿಗಳು ಹಾಗೂ ಮೃತಪಟ್ಟವರ ವಿಚಾರದಲ್ಲಿ ದೆಹಲಿ ಸರ್ಕಾರ ನಡೆದುಕೊಳ್ಳುವ ರೀತಿ ಭಯಾನಕವಾಗಿದೆ. ರೋಗಿಗಳನ್ನು ಆಸ್ಪತ್ರೆಗಳಲ್ಲಿ ಪ್ರಾಣಿಗಳಿಗಿಂತಲೂ ಕೀಳಾಗಿ ನೋಡುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಕೊರೊನಾ ರೋಗಿಗಳ ಚಿಕಿತ್ಸೆಗೆ ನಿರ್ಲಕ್ಷ್ಯ ತೋರಿಸುತ್ತಿರುವ ಬಗ್ಗೆ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‍ನ ನ್ಯಾ.ಅಶೋಕ್ ಭೂಷಣ್ ನೇತೃತ್ವದ ಪೀಠ, `ಕೊರೊನಾದಿಂದ ಮೃತಪಟ್ಟವರ ಶವಗಳ ಬಗ್ಗೆ ಆಸ್ಪತ್ರೆಗಳ ಸಿಬ್ಬಂದಿ ನಡೆದುಕೊಳ್ಳುವ ಸ್ಥಿತಿ ಬೇಸರ ಹುಟ್ಟಿಸುವಂತಿದೆ. ನಿಮ್ಮ ಆಡಳಿತ ವೈಖರಿ ಬಗ್ಗೆ ಹೇಳಲು ಪದಗಳು ಬರುತ್ತಿಲ್ಲ…ದಯವಿಟ್ಟು ಕ್ಷಮಿಸಿ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ನಿರ್ಲಕ್ಷ್ಯ ಹಾಗೂ ಶವಗಳ ಸಮರ್ಪಕ ವಿಲೇವಾರಿ ಮಾಡದ ಬಗ್ಗೆ ವಿವರಣೆ ನೀಡುವಂತೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಮೃತ ದೇಹಗಳ ಬಗ್ಗೆ ನಿರ್ಲಕ್ಷ್ಯ ಹಾಗೂ ಅಗೌರವ ತೋರಿಸುವುದು ಅಪರಾಧವಾಗಿದೆ ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ ಸಾಲಿಸಿಟರಲ್ ಜನರಲ್ ತುಷರ್ ಮೆಹ್ತಾ ಕೋರ್ಟ್‍ಗೆ ದಾಖಲೆ ಸಮೇತ ವಿವರಣೆ ನೀಡಿದರು.
ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ಶವವೊಂದನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ. ತಮ್ಮವರನ್ನು ಕಳೆದುಕೊಂಡವರು ಕಣ್ಣೀರಿಡುತ್ತಿದ್ದರೂ ಯಾರೊಬ್ಬರು ಅವರನ್ನು ಸಂಪರ್ಕಿಸುತ್ತಿಲ್ಲ. ಕೊರೊನಾದಿಂದ ರೋಗಿ ಮೃತಪಟ್ಟಿದ್ದರೂ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡುತ್ತಿಲ್ಲ. ಮೃತ ದೇಹಗಳಿಗೆ ಅಂತಿಮ ಗೌರವ ಸಲ್ಲಿಸಲೂ ಬಿಡುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಆಸ್ಪತ್ರೆಗಳ ಸಿಬ್ಬಂದಿ ವಿರುದ್ಧ ಕಟುವಾದ ಶಬ್ದಗಳಲ್ಲಿ ಆಕ್ರೋಶ ಹೊರಹಾಕಿದೆ.
ರಾಜಧಾನಿ ದೆಹಲಿಯಲ್ಲಿ ಕೊರೊನಾ ಅಟ್ಟಹಾಸ ಮಿತಿ ಮೀರಿದ್ದು, ಪರಿಸ್ಥಿತಿ ಭಯಾನಕವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 2500 ಬೆಡ್‍ಗಳು ಖಾಲಿ ಇದ್ದರೂ ಯಾರೋಬ್ಬರು ಅತ್ತ ತಲೆ ಹಾಕುತ್ತಿಲ್ಲ ಎಂದು ಸುಪ್ರೀಂಕೋರ್ಟ್ ದೆಹಲಿಯ ಅರವಿಂದ ಕೇಜ್ರಿವಾಲ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ..