ಕೊಲೆ ಕೇಸ್ – 40 ವರ್ಷಗಳ ಬಳಿಕ ನಿರಪರಾಧಿ ಎಂದು ಸಾಬೀತು
ಪತ್ನಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ
ಜೈಲಿನಲ್ಲಿದ್ದ ಆರೋಪಿ ಖುಲಾಸೆಗೊಳಿಸಿದ ಸುಪ್ರೀಂ ಕೋರ್ಟ್
ಪಶ್ಚಿಮ ಬಂಗಾಳದ ಪುರ್ದ್ವಾನ್ ಜಿಲ್ಲೆಯ ಗ್ರಾಮದ ವ್ಯಕ್ತಿ
1983ರ ಮಾರ್ಚ್‌ನಲ್ಲಿ ಬಂಧನ , ಜೀವಾವಧಿ ಶಿಕ್ಷೆಗೆ ಗುರಿ
ಕೊಲೆ ಆರೋಪವೊಂದ್ರಲ್ಲಿ ಬಂಧಿತನಾಗಿ ಜೈಲಿನಲ್ಲಿದ್ದ , ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿ 40 ವರ್ಷಗಳ ಬಳಿಕ ನಿರಪರಾಧಿ ಎಂದು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
ಪಶ್ಚಿಮ ಬಂಗಾಳದ ಪುರ್ದ್ವಾನ್ ಜಿಲ್ಲೆಯ ಗ್ರಾಮವೊಂದರಲ್ಲಿ ತನ್ನ ಪತ್ನಿಯ ಕೊಲೆಗೆ ಸಂಬಂಧಿಸಿದಂತೆ ನಿಖಿಲ್ ಚಂದ್ರ ಮಂಡಲ್ ಎಂಬಾತ ನ್ಯಾಯಾಲಯದ ಬಾಹ್ಯ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂಬ ಆಧಾರದಲ್ಲಿ 1983ರ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು.
ಆದರೆ ಇದೇ ಪ್ರಕರಣದಲ್ಲಿ ನಾಲ್ಕು ವರ್ಷಗಳ ನಂತರ 1987ರ ಮಾರ್ಚ್‌ನಲ್ಲಿ ವಿಚಾರಣಾ ನ್ಯಾಯಾಲಯವು ಆತನನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿತ್ತು.
ನ್ಯಾಯಾಲಯದ ಹೊರಗಿನ ತಪ್ಪೊಪ್ಪಿಗೆಯ ಹೊರತಾಗಿ ಸ್ವತಂತ್ರ ಪುರಾವೆಗಳನ್ನು ಹಾಜರುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಕೋರ್ಟ್ ಹೇಳಿತ್ತು.
ನಂತರ ಸುಮಾರು 22 ವರ್ಷಗಳ ಬಳಿಕ ಕೊಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠ 2008ರ ಡಿಸೆಂಬರ್‌ನಲ್ಲಿ ಈ ಪ್ರಕರಣದಲ್ಲಿ ಮಂಡಲ್ ತಪ್ಪಿತಸ್ಥನೆಂದು ತೀರ್ಪು ನೀಡಿ, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ನಿಖಿಲ್ ಚಂದ್ರ ಮಂಡಲ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ 2009ರಲ್ಲಿಯೇ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಆದರೆ 14 ವರ್ಷ ಆತನ ಅರ್ಜಿ ಅಲ್ಲಿಯೇ ಬಾಕಿ ಉಳಿದಿತ್ತು.
ಇದೀಗ ಆತನ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಬಿಆರ್ ಗವಾಯ್ ಮತ್ತು ಸಂಜಯ್ ಕರೋಲ್ ಅವರ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ನಿರ್ಧಾರ ಸರಿಯಾಗಿದೆ ಎಂದು ಹೈಕೋರ್ಟ್ ತೀರ್ಪನ್ನು ವಜಾಗೊಳಿಸಿದೆ.
Supreme Court : Murder case – man Proved innocent after 40 years