ನವದೆಹಲಿ : ಮುಸ್ಲಿಂ ಮೀಸಲಾತಿ 2ಬಿಯನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ರಾಜ್ಯ ಸರ್ಕಾರದ 2ಬಿ ಮೀಸಲಾತಿ ರದ್ದತಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ನ್ಯಾಯಾಲಯದ ಆದೇಶದಿಂದ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾದಂತಾಗಿದೆ. ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದಲ್ಲಿ ಮುಸ್ಲಿಂರಿಗೆ ನೀಡಲಾಗಿದ್ದ ಸುಮಾರು ಮೂರು ದಶಕಗಳಷ್ಟು ಹಿಂದಿನ ಶೇ 4ರ ಮೀಸಲಾತಿಯನ್ನು ರದ್ದುಗೊಳಿಸಿದ ಬಿಜೆಪಿ ನೇತೃತ್ವದ ಸರ್ಕಾರದ ವಿವಾದಾತ್ಮಕ ನಿರ್ಧಾರದ ಕುರಿತು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ ಸರ್ಕಾರದ ಆದೇಶಕ್ಕೆ ತಡೆ ನೀಡಿ, ವಿಚಾರಣೆಯನ್ನು ಮೇ 9 ಕ್ಕೆ ಮುಂದೂಡಿದೆ.
ಮುಸ್ಲಿಮರ ಶೇ 4ರ ಒಬಿಸಿ ಕೋಟಾವನ್ನು ರದ್ದುಪಡಿಸಿ, ಒಕ್ಕಲಿಗರು ಹಾಗೂ ಲಿಂಗಾಯತರ ಮೀಸಲಾತಿಯನ್ನು ತಲಾ ಶೇ 2ರಷ್ಟು ಹೆಚ್ಚಿಸುವ ನಿರ್ಧಾರವು ಮೇಲ್ನೋಟಕ್ಕೆ ಅಸ್ಥಿರ ಹಾಗೂ ದೋಷಪೂರಿತ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ನಾಲ್ಕು ದಶಕಗಳಿಂದ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ರಾಜ್ಯ ಸರ್ಕಾರವು ಒಕ್ಕಲಿಗ ಮತ್ತು ಲಿಂಗಾಯತರಿಗೆ ತಲಾ ಶೇ. 2ರಷ್ಟು ಮೀಸಲಾತಿ ಹಂಚಿಕೆ ಮಾಡಿತ್ತು.
ಈ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಎಂ ಜೋಸೆಫ್ ಅವರ ನೇತೃತ್ವದ ಪೀಠ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ. ಸುಪ್ರೀಂಕೋರ್ಟ್ ಆದೇಶದಿಂದಾಗಿ ಈಗ ಒಕ್ಕಲಿಗ ಮತ್ತು ಲಿಂಗಾಯತ ಮೀಸಲಾತಿ ಹೆಚ್ಚಳದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.