ಆಕ್ಸಿಜನ್ ಕೊರತೆಯಿಂದ ಯಾರು ಮೃತಪಟ್ಟಿಲ್ಲ : ಸುರೇಶ್ ಕುಮಾರ್
ಚಾಮರಾಜನಗರ : ಜಿಲ್ಲಾಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ ಸಂಭಸಿರುವ ಸಾವುಗಳು ಆಕ್ಸಿಜನ್ ಕೊರತೆಯಿಂದಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಕ್ಸಿಜನ್ ಕೊರತೆಯಿಂದಾಗಿ ಯಾರು ಮೃತಪಟ್ಟಿಲ್ಲ. 15 ಜನ ಕೋವಿಡ್, 5 ಜನ ಸಿಎಲ್ ಎಸ್ ರೋಗಿಗಳು ಮೃತಪಟ್ಟಿದ್ದು, ಯಾರೂ ಸಹ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿವೆ. ಇಬ್ಬರು ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಮುಂಚೆಯೇ ಸತ್ತಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಅಕ್ಸಿಜನ್ ಕೊರತೆಯಿಂದ ಸಾವು ಎಂಬ ಸತ್ಯಕ್ಕೆ ದೂರವಾದ ಸುದ್ದಿ ಬರುತ್ತಿವೆ ಎಂದು ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದರು.
ಸದ್ಯಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. 1900 ಲೀಟರ್ ಲಿಕ್ವಿಡ್ ಆಕ್ಸಿಜನ್ ಇದೆ. ಜೊತೆಗೆ 122 ಜಂಬೋ ಸಿಲಿಂಡರ್ ಆಕ್ಸಿಜನ್ ಇದೆ. ಮದ್ಯಾಹ್ನದ ವೇಳೆಗೆ ಇನ್ನೂ 150 ಸಿಲಿಂಡರ್ ಬರಲಿವೆ. ಜಿಲ್ಲಾಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ಸಾವಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯ ಆಯುಕ್ತರ ಜೊತೆ ಮಾತನಾಡಿದ್ದೇನೆ.
ಸಾವಿನ ವಿಶ್ಲೇಷಣೆಗಾಗಿ ಅವರು ಪರಿಣಿತರ ತಂಡವನ್ನು ಚಾಮರಾಜನಗರಕ್ಕೆ ಕಳುಹಿಸಿಕೊಡುತ್ತಿದ್ದಾರೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಪರಿಣಿತರ ತಂಡ ಚಾಮರಾಜನಗರಕ್ಕೆ ಆಗಮಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.