ಎಲೆಕ್ಷನ್ ಸಮೀಪಿಸುತ್ತಿದ್ದಂತೆ ಯೋಗಿಗೆ ಶಾಕ್.. ಪಕ್ಷಾಂತರ ಪರ್ವ ಶುರು
ಲಕ್ನೋ : ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ರಾಜಕೀಯ ಪಕ್ಷಗಳು ಗೆಲುವಿಗೆ ರಣತಂತ್ರಗಳನ್ನು ರೂಪಿಸುತ್ತಿವೆ.
ಅದರ ಭಾಗವಾಗಿ ಉತ್ತರ ಪ್ರದೇಶದಲ್ಲಿ ಪಕ್ಷಾಂತರ ಪರ್ವವೂ ಆರಂಭವಾಗಿದೆ.
ಮುಖ್ಯವಾಗಿ ಆಡಳಿತರೂಢ ಬಿಜೆಪಿಗೆ ಆಘಾತ ಎದುರಾಗಿದ್ದು, ಬಿಜೆಪಿಯ ಸಚಿವರೊಬ್ಬರು ಹಾಗೂ ನಾಲ್ವರು ಶಾಸಕರು ಪಕ್ಷವನ್ನು ತೊರೆದು ಇಂದು ಸಮಾಜವಾದಿ ಪಕ್ಷ (ಎಸ್ಪಿ) ಸೇರಲಿದ್ದಾರೆ.
ಯೋಗಿ ಸರ್ಕಾರದಲ್ಲಿ ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದು, ಟ್ವಿಟ್ಟರ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿಕೊಂಡಿದ್ದಾರೆ.
ಇವರ ಜೊತೆಗೆ ಬಿಜೆಪಿ ಶಾಸಕರಾದ ರೋಷನ್ ಲಾ ವರ್ಮಾ, ಬ್ರಿಜೇಶ್ ಪ್ರಜಾಪತಿ, ಭಾಗ್ವತಿ ಸಾಗರ್, ವಿನಯ್ ಶಂಕ್ಯಾ ಅವರು ಕೂಡ ರಾಜೀನಾಮೆ ನೀಡಿದ್ದಾರೆ.
ಹೀಗಾಗಿ ಚುನಾವಣೆಗೆ ತಯಾರಿ ಆರಂಭಿಸಿರುವ ಬಿಜೆಪಿ ಹಿನ್ನಡೆಯಾದಂತೆ ಆಗಿದೆ.
ಇನ್ನು ಸ್ವಾಮಿ ಪ್ರಸಾದ್ ಮೌರ್ಯ, ಒಬಿಸಿ ಸಮುದಾಯದ ಪ್ರಭಾವಿ ನಾಯಕನಾಗಿದ್ದು, 2016ರಲ್ಲಿ ಬಿಎಸ್ಪಿ ತೊರೆದು ಬಿಜೆಪಿ ಸೇರಿದ್ದರು.
ಮೌರ್ಯ ಅವರು ಒಬಿಸಿ ಸಮುದಾಯದ ಮತಗಳನ್ನ ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.