ಸ್ವರ ಸಾಮ್ರಾಟ ‘ಭೀಮ’ಸೇನ ಜೋಶಿ..

1 min read

ಸ್ವರ ಸಾಮ್ರಾಟ ‘ಭೀಮ’ಸೇನ ಜೋಶಿ.. Marjala manthana Bhimsen Joshi

ಹಾಡಲೆಂದೇ ಹುಟ್ಟಿದ ಆ ಗಾನಗಂಧರ್ವನ ಬದುಕೇ ಒಂದು ಹೋರಾಟ.. ಇಡೀ ಜಗತ್ತೇ ಗುರುತಿಸುವ ಸ್ವರ ಸಾಮ್ರಾಟ, ಕರುನಾಡಿನ ಎರಡನೇ ಭಾರತರತ್ನ ಪುರಸ್ಕೃತ ಸಾಧಕ.. ಹಿಂದೂಸ್ತಾನಿ ಸಂಗೀತ ಹಾಗೂ ಘರಾನಾಗಳ ಮೂಲಕ ಶ್ರೋತೃಗಳ ಮೋಡಿ ಮಾಡಿದ ನಾದಲೋಲ.. Marjala manthana Bhimsen Joshi

Marjala manthana Bhimsen Joshi

ಪಂಡಿತ ಭೀಮಸೇನ ಗುರುರಾಜ ಜೋಷಿ, ಹಿಂದುಸ್ತಾನಿ ಸಂಗೀತ ಪದ್ಧತಿಯ ಅತಿ ಪ್ರಸಿದ್ಧ ಗಾಯಕ.. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಹಿಂದುಸ್ತಾನಿ ಸಂಗೀತ ಪದ್ಧತಿಯ ಮಹೋನ್ನತ ಗಾಯಕ.. ಕನ್ನಡ, ಮರಾಠಿ ಹಾಗೂ ಹಿಂದಿ ಭಾಷೆಯಲ್ಲಿ ಹಲವು ವರ್ಷಗಳ ಕಾಲ ಹಿಂದೂಸ್ತಾನಿ ಸಂಗೀತಾಸಕ್ತರ ಹೃದಯ ಸಾಮ್ರಾಟ್ ಆಗಿ ವಿರಾಜಮಾನರಾದ ಗಾನ ಕಲಾ ತಪಸ್ವಿ..

ಭೀಮಸೇನ್ ಜೋಶಿಯ ಬದುಕು ಎಂದರೆ ಅಲ್ಲಿ ಎರಡೇ ಸಂಗತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇತ್ತು.. ಒಂದು ಸಂಗೀತ ಹಾಗೂ ಇನ್ನೊಂದು ಸವಾಯಿ ಗಂಧರ್ವರ ಕುರಿತಾಗಿ ಇದ್ದ ಗುರುಭಕ್ತಿ..

ಶ್ರೋತೃಗಳು ಸುಶ್ರಾವ್ಯ ಕರ್ನಾಟಕ ಸಂಗೀತದ ನಾದಪ್ರಭಾವಕ್ಕೆ ಒಳಗಾಗಿ ಮರುಳಾಗಿದ್ದ ಸಮಯದಲ್ಲಿ ಹಿಂದೂಸ್ಥಾನಿ ಸಂಗೀತದ ಮಹಾ ಅಲೆ ಎಬ್ಬಿಸಿದ ಮಹೋನ್ನತ ಗಾನಗಾರುಡಿಗ ಡಾ. ಪಂಡಿತ್ ಭೀಮ್​ಸೇನ್ ಜೋಶಿ.. ಭೀಮಸೇನ ಜೋಷಿ, ಹಿಂದೂಸ್ಥಾನಿ ಗಾಯನದ ಅದ್ವಿತೀಯ ಗಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ.. ಪ್ರತಿಯೊಂದು ರಾಗಗಳ ಮೇಲೆ ಅವರಿಗಿದ್ದ ಹಿಡಿತ, ಪ್ರಭುತ್ವ ಅದ್ಭುತವಾದುದ್ದು.. ಅವರ ಘರಾನಾ, ಖಯಾಲ್, ಆಲಾಪ್ ಹಾಗೂ ಮನೋಧರ್ಮ ಪ್ರಶ್ನಾತೀತ ಹಾಗೂ ಅತ್ಯದ್ಭುತ ಅನ್ನುವುದು ನಿರ್ವಿವಾದಿತ ಸತ್ಯ..

 

ವಿಶ್ವೇಶ್ವರಯ್ಯನವರ ನಂತರ ಸುದೀರ್ಘ 53 ಸಂವತ್ಸರಗಳ ಬಳಿಕ ಕನ್ನಡ ನೆಲಕ್ಕೆ ಮತ್ತೊಂದು ಭಾರತ ರತ್ನ ಪುರಸ್ಕಾರ ತಂದುಕೊಟ್ಟವರು ಪಂಡಿತ್ ಭೀಮಸೇನ್ ಜೋಶಿ.. ಸಂಗೀತ ಕ್ಷೇತ್ರಕ್ಕೆ, ಕರುನಾಡಿಗೆ ಮೊದಲ ಭಾರತ ರತ್ನದ ಹಿಗ್ಗು ಒದಗಿಸಿದ ಸ್ವರ ಸಾಮ್ರಾಟ ಭೀಮಸೇನ ಜೋಶಿ..

ಭೀಮಸೇನ ಜೋಷಿ, ಫೆಬ್ರವರಿ 4, 1922, ರಥಸಪ್ತಮಿಯ ದಿನದಂದು ಅವಿಭಜಿತ ಧಾರವಾಡ ಜಿಲ್ಲೆ ಅಥವಾ ಈಗಿನ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಜನಿಸಿದರು.. ಇವರ ಪೂರ್ವಜರು ಮೂಲತಃ ಗದಗದ ’ಹೊಂಬಳ’ ಗ್ರಾಮದವರು.. ಭೀಮಸೇನ್ ಜೋಶಿಯವರ ತಂದೆ ಗುರುರಾಜ ಜೋಶಿ ಸಂಸ್ಕೃತದಲ್ಲಿ ಪಂಡಿತರು ಅಷ್ಟೇ ಅಲ್ಲ ಕನ್ನಡ-ಇಂಗ್ಲೀಷ್ ನಿಘಂಟು ರಚನೆಕಾರರೂ ಹೌದು.. ಗೋದಾವರಿ ಬಾಯಿ ಹಾಗೂ ರಮಾ ಬಾಯಿ ಇವರ ತಾಯಂದಿರು.. ಭೀಮಸೇನ ಜೋಶಿ ತಮ್ಮ ಪರಿವಾರದ 16 ಮಕ್ಕಳಲ್ಲಿ ಮೊದಲನೆಯವರು.. ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಭೀಮಸೇನರು ಮಲತಾಯಿಯ ಪೋಷಣೆಯಲ್ಲಿ ಬೆಳೆದರು..

ಭೀಮಸೇನ್ ಜೋಶಿಯವರು ಬಾಲ್ಯದಲ್ಲಿ ಕೇಳಿದ್ದ ಅಬ್ದುಲ್ ಕರೀಮ್ ಖಾನ್​ರ ತುಮ್ರಿ, ರಾಗ ಜಿನ್ಜೋತಿಯ “ಪಿಯಾ ಬಿನ್ ನಹಿ ಆವತ್ ಚೈನ್” ಗಾಯನವೇ ಅವರನ್ನು ಸಂಗೀತ ಕ್ಷೇತ್ರದತ್ತ ಎಳೆಯಲು ಪ್ರೇರಕವಾಗಿದ್ದ ಸಂಗತಿ.. ಬಾಲ್ಯದ ದಿನಗಳಲ್ಲಿ ಭೀಮಸೇನ್​​ರಿಗೆ ಸಂಗೀತ ವಾದ್ಯಗಳಾದ ಹಾರ್ಮೋನಿಯಂ ಮತ್ತು ತಾನ್ಪುರದ ಆಕರ್ಷಣೆ ಅಧಿಕವಾಗಿತ್ತು.. ಎಲ್ಲೇ ಸಂಗೀತ ಬ್ಯಾಂಡ್ ಮೆರವಣಿಗೆ ಕಂಡರೂ ಹಿಂದೆ ಹೊರಟುಬಿಡುತ್ತಿದ್ದರಂತೆ ಭೀಮ್​ಸೇನ್​ ಜೋಶಿ.. ಹೀಗೆ ನಾಪತ್ತೆಯಾಗುತ್ತಿದ್ದ ಮಗನನ್ನು ಪತ್ತೆ ಹಚ್ಚಲು ಆಗಾಗ ಪೊಲೀಸ್​​ ಠಾಣೆ ಮೆಟ್ಟಿಲೇರಬೇಕಾದ ಅನಿವಾರ್ಯತೆ ತಂದೆಗೆ ಎದುರಾಗುತ್ತಿತ್ತು.. ಹೀಗಾಗಿ ಮಗನ ಎಲ್ಲ ಬಟ್ಟೆಗಳ ಮೇಲೂ “ಜೋಷಿ ಮಾಸ್ತರರ ಮಗ” ಎಂದು ಬರೆದು ಕಳಿಸುತ್ತಿದ್ದರಂತೆ..

Marjala manthana Bhimsen Joshi

ಬಾಲ್ಯದಲ್ಲಿಯೇ ಸಂಗೀತದೆಡೆಗೆ ಅಪಾರ ಆಕರ್ಷಣೆ ಹೊಂದಿದ್ದ ಭೀಮಸೇನರು ಸಂಗೀತ ಸಾಧನೆಗಾಗಿ 1933ರಲ್ಲಿ, 13ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದರು.. ರೈಲಿನಲ್ಲಿ ಸಹ ಪ್ರಯಾಣಿಕರು ನೀಡಿದ ಹಣದ ಸಹಾಯದಿಂದ, ಬಿಜಾಪುರ ತಲುಪಿ ನಂತರ ಪುಣೆಗೆ ಹೋದರು. ನಂತರ ಅವರು ಗ್ವಾಲಿಯರ್​​ಗೆ ತೆರಳಿದರು.. ಅಬ್ದುಲ್ ಕರೀಂ ಖಾನ್​ರ ಅದ್ಭುತ ಗಾಯನಕ್ಕೆ ಮನ ಸೋತಿದ್ದ ಭೀಮಸೇನರು, ದೆಹಲಿ, ಕೋಲ್ಕತಾ, ಗ್ವಾಲಿಯರ್, ಲಕ್ನೋ ಮತ್ತು ರಾಮಪುರದಲ್ಲಿ ನಿರಂತರ 3 ವರ್ಷಗಳ ಕಾಲ ಸೂಕ್ತ ಗುರುವಿನ ಅನ್ವೇಷಣೆಯಲ್ಲಿ ತೊಡಗಿದ್ದರು.. ಅದೇ ವೇಳೆ ಅವರಿಗೆ ಗುರುವಾಗಿ ಸಿಕ್ಕವರು ಗ್ವಾಲಿಯರ್‌ನ ಪ್ರಸಿದ್ಧ ಸರೋದ್ ವಾದಕ ಉಸ್ತಾದ್ ಹಫೀಜ್‌ ಅಲಿ ಖಾನ್.. ಗ್ವಾಲಿಯರ್​​ನಲ್ಲಿ ಅಂದಿನ ಮಹಾರಾಜರು ನಡೆಸುತ್ತಿದ್ದ ಮಾಧವ ಸಂಗೀತ ಶಾಲೆ ಸೇರಿದರು.. ಮನೆ ಬಿಟ್ಟು ಹೋದ ಮಗನ ನೆನೆದು ಕಂಗಾಲಾಗಿದ್ದ ಕುಟುಂಬದವರು ಕೊನೆಗೆ ಸುದ್ದಿ ತಿಳಿದು ಗ್ವಾಲಿಯರ್​ಗೆ ತೆರಳಿ ಮಗನನ್ನು ಮನೆಗೆ ಕರೆತಂದರು..

ಇತ್ತ ಮರಳಿ ಮನೆಗೆ ಬಂದರೂ ರಾಗದ ಕುರಿತಾದ ಭೀಮನ ಆಸಕ್ತಿ ಮಾತ್ರ ದಿನೇ ದಿನೇ ವೃದ್ಧಿಸತೊಡಗಿತ್ತು.. ಹೀಗಾಗಿ 1936ರಲ್ಲಿ ಧಾರವಾಡ ಜಿಲ್ಲೆ ಕುಂದಗೋಳದ ಸವಾಯಿ ಗಂಧರ್ವ ಎಂದೇ ಖ್ಯಾತರಾಗಿದ್ದ ರಾಮಭಾವು ಕುಂದಗೋಳಕರ ಬಳಿ ಭೀಮಸೇನರನ್ನು ಸೇರಿಸಲಾಯ್ತು.. ಕಿರಾಣಾ ಘರಾನೆಯ ಪಿತಾಮಹರೆಂದೇ ಖ್ಯಾತರಾಗಿದ್ದ ಅಬ್ದುಲ್ ಕರೀಂ ಖಾನ್ ಶಿಷ್ಯ ಈ ಕುಂದಗೋಳಕರ.. ಅವರಲ್ಲಿ ನಾಲ್ಕು ವರ್ಷ ಪಳಗಿದ ಭೀಮಸೇನರು ಆನಂತರ ಸವಾಯಿ ಗಂಧರ್ವರ ಬಳಿ ಸಂಗೀತದ ಇನ್ನಷ್ಟು ಕಲಿಕೆಗೆ ಸೇರಿಕೊಂಡ ಅವರು, ಗುರು-ಶಿಷ್ಯ ಸಂಪ್ರದಾಯದಂತೆ ಸವಾಯಿ ಗಂಧರ್ವರ ಮನೆಯಲ್ಲಿ ಉಳಿದು 1938ರಿಂದ 1942ರ ತನಕ ಸಂಪೂರ್ಣ ಹಾಗೂ ಪರಿಪೂರ್ಣ ತರಬೇತಿ ಪಡೆದರು..

19ರ ವಯಸ್ಸಿನಲ್ಲಿದ್ದಾಗ ಮೊದಲ ಸಂಗೀತ ಕಚೇರಿ ನೀಡಿದ್ದ ಭೀಮಸೇನ್ ಜೋಶಿ; 20ನೇ ವಯಸ್ಸಿನಲ್ಲಿದ್ದಾಗಲೇ ಕನ್ನಡ ಮತ್ತು ಹಿಂದಿ ಭಕ್ತಿ ಗೀತೆಗಳ ಆಲ್ಬಂ ಬಿಡುಗಡೆಗೊಳಿಸಿದ್ರು.. ಭೀಮ್ ಪಲಾಸ್ ರಾಗದಲ್ಲಿ ‘ಬೇಗುನ ಗುನ ಗಾಯೀಯೆ’ ಎಂದು ಭೀಮಸೇನ್ ಜೋಶಿಯವರು ಹಾಡುತ್ತಿದ್ದರೆ ಹುಬ್ಬಳ್ಳಿಯ ಬೀದಿ ಬೀದಿಗಳಲ್ಲೂ ಅನುರಣವಾಗ್ತಿತ್ತು ಅನ್ನುವುದು ಹಳೆಯ ತಲೆಮಾರಿನ ಸಂಗೀತ ಪ್ರೇಮಿಗಳಲ್ಲಿದ್ದ ಪ್ರಸಿದ್ಧ ಮಾತು.. 1946ರಲ್ಲಿ ತಮ್ಮ ಗುರು ಸವಾಯಿ ಗಂಧರ್ವರ 60ರ ಜನ್ಮದಿನದ ಪ್ರಯುಕ್ತ ಭೀಮ್​ಸೇನ್ ಜೋಶಿ ನಡೆಸಿಕೊಟ್ಟ ಸಂಗೀತ ಪ್ರದರ್ಶನ ಇತಿಹಾಸ ನಿರ್ಮಿಸಿತ್ತು..

ಭೀಮಸೇನ ಜೋಶಿಯವರ ಸಂಗೀತ ಪ್ರೀತಿಯ ಕುರಿತಾಗಿ ಹಾಗೂ ಸಂಗೀತ ಕಲಿಕೆಯ ಹತ್ತಾರು ಅವಿಸ್ಮರಣೀಯ ಕ್ಷಣಗಳನ್ನು ಹಿಡಿದಿಟ್ಟ ಪುಸ್ತಕವೇ ನಾದಪುತ್ರ ಹುಟ್ಟಿದ.. ಇದನ್ನು ಬರೆದವರು ಸ್ವತಃ ಭೀಮಸೇನ ಜೋಶಿಯವರ ತಂದೆ ಗುರುರಾಜ ಜೋಶಿ..

ಭಕ್ತಿ ಸಂಗೀತದ ಭಜನೆಗಳು ಮತ್ತು ಅಭಂಗಗಳು ಹಾಗೂ ಖಯಾಲ್ ರೂಪದ ಹಾಡುಗಾರಿಕೆ ಭೀಮ್​ಸೇನ್ ಜೋಶಿಯವರಿಗೆ ಶಾಶ್ವತವಾಗಿ ಕೀರ್ತಿ ತಂದುಕೊಟ್ಟವು ಎಂದರೆ ತಪ್ಪಿಲ್ಲ.. ಭೀಮಸೇನ ಜೋಶಿಯವರ ಹಲವು ಸಂಗೀತದ ಧ್ವನಿಮುದ್ರಿಕೆಗಳು ಕೋಟ್ಯಾಂತರ ರಸಿಕ ಶ್ರೋತೃಗಳ ಕಿವಿಗಿಂಪು ಮಾಡಿವೆ; ಮೈ ಮನಸ್ಸುಗಳನ್ನು ಪ್ರಫುಲ್ಲಗೊಳಿಸಿವೆ..

ಕರುನಾಡಿನ ಸಂಗೀತ ಲೋಕದ ಮಾಂತ್ರಿಕ ಭೀಮಸೇನ್ ಜೋಶಿ, ತಮ್ಮಿಡಿ ಬದುಕನ್ನು ಕೇವಲ ಸಂಗೀತಕ್ಕಾಗಿಯೇ ಮೀಸಲಿಟ್ಟವರು.. ಕೊನೆಯ ದಿನದವರೆಗೂ ಆಲಾಪ್​ಗಳ ಗುಂಗಿನಲ್ಲೇ ಬದುಕಿದವರು ಅವರು.. ಭೀಮಸೇನ್ ಜೋಷಿ, ಕಿರಾಣಾ ಘರಾನಾದಲ್ಲಿ ಅಪ್ಪಟ ಪ್ರಾವೀಣ್ಯತೆ ಸಾಧಿಸಿದ್ದ ರಾಗಋಷಿ.. ಅವರ ಖಯಾಲ್ ಮಾದರಿಯ ಗಾಯನ ಹಾಗೂ ಭಜನ್ ಶೈಲಿಯ ಗಾಯನಗಳು ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದವು.. ಪುರಂದರ ದಾಸರ ಕೀರ್ತನೆ ಭಾಗ್ಯದ ಲಕ್ಷ್ಮೀ ಬಾರಮ್ಮಕ್ಕೆ ಅನನ್ಯತೆ ತಂದುಕೊಟ್ಟಿದ್ದೇ ಪಂಡಿತ್ ಭೀಮಸೇನರ ಗಾನಮಾಧುರ್ಯದ ಹಿರಿಮೆ..

ಭೀಮಸೇನ ಜೋಷಿ ಅವರ ದಿ ಎವರ್​ಗ್ರೀನ್ ಕೊಡುಗೆ ದೂರದರ್ಶನ್ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ಮೀಲೆ ಸುರ್ ಮೇರಾ ತುಮ್ಹಾರಾ.. ದೇಶದಾದ್ಯಂತ ಮನೆ ಮನಗಳ ತಲುಪಿದೆ ಈ ಮೀಲೆ ಸುರ್ ಮೇರಾ ತುಮ್ಹಾರಾ ಸಾರ್ವಕಾಲಿಕ ಜನಪ್ರಿಯ ಗೀತೆ.. ಲೋಕ ಸೇವಾ ಸಂಚಾರ ಪರಿಷದ್ ನಿರ್ಮಿಸಿದ, ಪಿಯೂಷ್ ಪಾಂಡೆ ರಚಿಸಿದ್ದ, ಅಶೋಕ ಪಟ್ಕಿ ಹಾಗೂ ಲೂಯಿ ಬ್ಯಾಂಕ್ಸ್ ಸಂಗೀತ ನಿರ್ದೇಶನದ ಹಾಗೂ ಸುರೇಶ್ ಮುಲಿಕ್ ನಿರ್ದೇಶಿಸಿದ ಈ ಗೀತೆ ಇಂದಿಗೂ ಒಂದು ವರ್ಗದ ಹಾಗೂ ಒಂದು ವಯೋಮಾನದ ಜನರ ಸ್ಮೃತಿಯಲ್ಲಿ ಆಹ್ಲಾದಕರ ಭಾವ ಹರಿಸುತ್ತದೆ.. 1988ರ ಸ್ವಾತಂತ್ರ್ಯ ದಿನದಂದು ದೆಹಲಿಯಲ್ಲಿ ಪ್ರಧಾನಮಂತ್ರಿಗಳ ಭಾಷಣದ ನಂತರ ಇದನ್ನು ಪ್ರಪ್ರಥಮವಾಗಿ ಹಾಡಲಾಗಿತ್ತು.. ಈ ಗೀತೆ ಜನಪ್ರಿಯತೆಗೆ ಮುಖ್ಯ ಕಾರಣ ಎಂದರೆ ಈ ಗೀತೆಯಲ್ಲಿ 14 ಭಾಷೆಗಳು ಅಡಕವಾಗಿವೆ. ಭಾರತದ ವೈವಿದ್ಯತೆಯನ್ನು ಸಾರುವಂತಿದೆ.

1931ರಲ್ಲಿ ಗದಗದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಂಡಿತ್ ಜವಹರಲಾಲ್ ನೆಹರು ಎದುರು ’ವಂದೇ ಮಾತರಂ ಗೀತೆಯನ್ನು ಹಾಡಿದ್ದು ಇವರ ಜೀವನದ ಮಹತ್ವದ ಘಟ್ಟ.. 1941ರಲ್ಲಿ ಸವಾಯಿ ಗಂಧರ್ವರಿಂದ ಗಂಡಾಬಂಧನ, ಅದೇ ವರ್ಷ ಲಖನೌ ಆಕಾಶವಾಣಿ ಕೇಂದ್ರ’ದಲ್ಲಿ ನೌಕರಿ, 1942ರಲ್ಲಿ ಮುಂಬಯಿ ಮತ್ತು ನಿಜಾಮ ರೇಡಿಯೊದೊಡನೆ ಹಾಡಿನ ಒಪ್ಪಂದ ಮಾಡಿಕೊಂಡರು.. 1942 ಸುನಂದಾ ಕಟ್ಟಿ ಜೊತೆ ಮೊದಲ ವಿವಾಹವಾದ ಭೀಮಸೇನರು, 1951 ವತ್ಸಲಾ ಮುಧೋಳ್ಕರ್ ರವರ ಜೊತೆ ಎರಡನೆಯ ಮದುವೆಯಾದ್ರು.. ಪಂಡಿತ್ ಭೀಮಸೇನ ಜೋಷಿಯವರಿಗೆ ಪುಣೆಯಲ್ಲಿ ಇನ್ನೊಬ್ಬ ಖ್ಯಾತನಾಮ ಸಂಗೀತ ಲೋಕದ ಧ್ರುವತಾರೆ ಡಾ. ಗಂಗೂಬಾಯಿ ಹಾನಗಲ್ ಅವರು ತಮ್ಮ ಅಮೃತಹಸ್ತದಿಂದ, ಸಂಗೀತಕಲಾನಿಧಿ ಪ್ರಶಸ್ತಿ ಕೊಟ್ಟು ಸನ್ಮಾನಿಸಿದ್ದು ಅವರ ಬದುಕಿನ ಮತ್ತೊಂದು ಮಹತ್ವದ ಸಂಗತಿ..

ಸಂಗೀತದಲ್ಲಿ ’ಕಲಾಶ್ರೀ’ ರಾಗ ರಚಿಸಿದ ಅವರು ಮರಾಠಿ ಅಭಂಗ, ನಾಟ್ಯ ಸಂಗೀತ, ಹಿಂದಿ ಭಜನ್, ಕನ್ನಡದಲ್ಲಿ ದೇವರನಾಮಗಳನ್ನು ಹಾಡಿದ್ದಷ್ಟೇ ಅಲ್ಲದೇ, ಹಲವು ಚಲನಚಿತ್ರಗಳಿಗೂ ತಮ್ಮ ಕಂಠದಾನ ಮಾಡಿದ್ದಾರೆ. ಭೀಮಸೇನರ ಸಂತವಾಣಿ ಒಂದು ಕಾಲದಲ್ಲಿ ಭಾರೀ ಜನಪ್ರಿಯವಾಗಿದ್ದ ಕಾರ್ಯಕ್ರಮ.. ಭೀಮಸೇನ್ ಜೋಶಿಯವರ ತಂದೆ ಗುರುರಾಜ್ ಜೋಶಿ ತಮ್ಮ ಮಗನ ಸಂಗೀತ ಸಾಧನೆಯ ಹಿಂದಿನ ತೊಳಲಾಟ, ಗುರುವಿನ ಅನ್ವೇಷಣೆ, ಕಲಿಕೆಯ ಶ್ರದ್ಧೆ, ಸಂಗೀತಕ್ಕಾಗಿ ಮುಡಿಪಿಟ್ಟ ಬದುಕು, ತಪಸ್ಸು, ಬದ್ಧತೆಗಳ ಕುರಿತಾಗಿ ಪುಸ್ತಕ ಬರೆದಿದ್ದಾರೆ.. ಈ ಪುಸ್ತಕದ ಹೆಸರು ನಾದಪುತ್ರ ಹುಟ್ಟಿದ.. ಸಂಗೀತಕ್ಕಾಗಿಯೇ ಹುಟ್ಟಿದ ಸುಪುತ್ರನ ಜೀವಿತದ ಹಲವು ಅಮೂಲ್ಯ ಕ್ಷಣಗಳು ಈ ಪುಸ್ತಕದಲ್ಲಿವೆ..

ಭೀಮಸೇನ್ ಜೋಶಿಯವರಿಗೆ ತಮ್ಮ ಗುರುಗಳಾದ ಸವಾಯಿ ಗಂಧರ್ವರ ಕುರಿತಾಗಿ ಅಪಾರ ಗೌರವವಿತ್ತು.. ಹೀಗಾಗಿ ಅವರು ಪುಣೆಯಲ್ಲಿ ಬದುಕಿದ್ದ ತಮ್ಮ ಕಟ್ಟ ಕಡೆಯ ಕಾಲದವರೆಗೂ ಪ್ರತಿ ವರ್ಷ ಡಿಸೆಂಬರ್​ನಲ್ಲಿ, ಗುರುವಿನ ಸ್ಮರಣೆಗಾಗಿ ‘ಸವಾಯಿ ಗಂಧರ್ವ ಸಂಗೀತ ಉತ್ಸವ’ ನಡೆಸಿಕೊಂಡು ಬಂದಿದ್ದರು.,

ಪಂಡಿತ್ ಭೀಮ್​ಸೇನ್ ಜೋಶಿ, ಅತ್ಯಂತ ವೇಗವಾಗಿ ಕಾರು ಓಡಿಸುತ್ತಿದ್ದರು.. ಅವರ ಬದುಕಿನಲ್ಲಿ ಹಾಗೂ ವ್ಯಕ್ತಿತ್ವದಲ್ಲಿದ್ದ ಗಾಂಭೀರ್ಯ ಹಾಗೂ ಗಡಸು ನಡವಳಿಕೆ ಅವರ ಕ್ರಿಯೆಗಳಲ್ಲೂ ಇರುತ್ತಿತ್ತು..

ಭೀಮಸೇನ್ ಜೋಶಿ ಸ್ವಭಾವತಃ ಮಹಾಮೌನಿ ಹಾಗೂ ಗಂಭೀರ ಮುಖದವರು.. ಮೇಲ್ನೋಟಕ್ಕೆ ಕೋಪಿಷ್ಟರಂತೆ ಕಾಣುತ್ತಿದ್ದ ಅವರ ಮನಸಿನಲ್ಲಿ ಸದಾ ಹಿಂದೂಸ್ತಾನಿ ಸಂಗೀತದ ರಾಗಗಳೇ ನಾಟ್ಯವಾಡುತ್ತಿರುತ್ತಿತ್ತು.. ನಿದ್ರಿಸುವಾಗಲೂ ಆತ್ಮದಲ್ಲಿ ಬೃಂದಾವನ ಸಾರಂಗ, ಭೀಮ ಪಲಾಸಿ ತಾನ್​ಗಳು ಆಲಾಪನೆಗೈಯುತ್ತಿದ್ದವು.. ಈ ಗಾನಗಂಧರ್ವನ ನಿಜವಾದ ಅಸ್ಮಿತೆ ಸಂಗೀತ ಹಾಗೂ ಕೇವಲ ಸಂಗೀತ ಮಾತ್ರವಾಗಿತ್ತು..

ಕನ್ನಡದಲ್ಲಿ ಬಿಡುಗಡೆಯಾದ ಭೀಮಸೇನ್ ಜೋಷಿಯವರ ಪ್ರಮುಖ ಆಲ್ಬಮ್​ಗಳು ದಾಸವಾಣಿ ಹಾಗೂ ಎನ್ನ ಪಾಲಿಸೊ.. ಹಿಂದಿ ಭಜನೆಗಳು, ಮರಾಠಿ ಅಭಂಗ ಮತ್ತು ಹಲವು ನಾಟ್ಯಗೀತೆಗಳು ಅವರ ಅಪಾರ ಅಭಿಮಾನಿಗಳನ್ನು ಹಲವು ಕಾಲ ಕಾಡಿದೆ.. ಕಲ್ಕತ್ತದ ಹಿಂದೂಸ್ತಾನಿ ಕಚೇರಿಗಳಲ್ಲಿ ಹಾಡುವುದೆಂದರೆ ಯಾವುದೇ ಸಂಗೀತಗಾರನಿಗೆ ಪ್ರತಿಷ್ಠೆಯ ಪ್ರಶ್ನೆ ಅನ್ನುವ ಕಾಲಘಟ್ಟದಲ್ಲಿ ಭೀಮಸೇನ್ ಜೋಶಿ ಪ್ರತೀ ವರ್ಷ ಕನಿಷ್ಟ 20 ಬಾರಿ ಕಲ್ಕತ್ತಾಗೆ ಹೋಗಿ ಬರುತ್ತಿದ್ದರು.. ಕಲ್ಕತ್ತಾದ ಅತಿ ದೊಡ್ಡ ಸಂಗೀತ ಸಮ್ಮೇಳನಗಳಾದ ಆಲ್ ಬೆಂಗಾಲ್ ಮ್ಯೂಸಿಕ್ ಕಾನ್ಫರೆನ್ಸ್, ತಾನ್ಸೇನ್ ಮ್ಯೂಸಿಕ್ ಕಾನ್ಪರೆನ್ಸ್, ಡೋವರ್ ಲೇನ್ ಮ್ಯೂಸಿಕ್ ಕಾನ್ಪರೆನ್ಸ್ ಗಳಿಗೆ ಪ್ರತೀ ವರ್ಷ ಭೀಮಸೇನ್​ ಜೋಶಿಯವರಿಗೆ ತಪ್ಪದೇ ಆಹ್ವಾನ ಬರುತ್ತಿತ್ತು..
ಭೀಮಸೇನ್​ ಜೋಶಿಯವರಿಗೆ ಗದಗದ ಖಡಕ್ ರೊಟ್ಟಿ ಹಾಗೂ ಝುಣಕ ಅಂದ್ರ ಅಚ್ಚುಮೆಚ್ಚು.. ಹಲವು ಜನಪರ ಕೆಲಸ ಮಾಡಿದ್ದ ಭೀಮಸೇನ್​ ಜೋಶಿಯವರು ಸಂಗೀತದಿಂದ ಬಂದ ಹಣದಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿದ್ದರು.. 1983ರಲ್ಲಿ, ವೆಂಕಟೇಶ ಚಿತ್ರಮಂದಿರದ ಹತ್ತಿಕಾಳ್ ಕೂಟದಲ್ಲಿ, 1986ರಲ್ಲಿ ಕಾಟನ್ ಮಾರ್ಕೆಟ್​ನಲ್ಲಿ, 1992ರಲ್ಲಿ, ಅಭಿನಯರಂಗ ವಿದ್ಯಾದಾನ ಸಮಿತಿ ಹೈಸ್ಕೂಲ್ ಅವರಣದ ಕರ್ನಾಟಕ ಚಿತ್ರಮಂದಿರದಲ್ಲಿ ಸಂಗೀತ ಕಚೇರಿ ನಡೆಸಿ, ಅದರಲ್ಲಿ ಶೇಖರವಾದ ಹಣದಲ್ಲಿ ನಗರದ ವಿವಿಧ ಶಾಲೆಗಳ ಕೊಠಡಿ ನಿರ್ಮಾಣ ಕಾರ್ಯಗಳಿಗೆ ಮತ್ತು ದೇವಾಲಯಕ್ಕೆ ದೇಣಿಗೆ ನೀಡಿದ್ದರು..

ಆಕಾಶವಾಣಿ ಪ್ರಥಮ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ ರಾಮೇಶ್ವರ ಮಂದಿರ ನಡೆಸಿಕೊಟ್ಟ ಭೀಮಸೇನ್ ಜೋಶಿಯವರಿಗೆ ಪುಣೆಯ ಬ್ರಹ್ಮವೃಂದದಿಂದ ಪಂಡಿತ ಬಿರುದು ನೀಡಿ ಗೌರವಿಸಲಾಗಿತ್ತು.. ಕೇಂದ್ರ ಸರ್ಕಾರ ಕೊಡಮಾಡುವ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣಗಳು ಭೀಮ್​ಸೇನ್ ಜೋಶಿಯವರ ಜೀವಮಾನದ ಸಂಗೀತ ಸಾಧನೆಗೆ ದೊರಕಿದ ಮನ್ನಣೆ.. 2008ರಲ್ಲಿ ಭಾರತದ ಸರ್ವೋನ್ನತ ಪ್ರಶಸ್ತಿ ಭಾರತ ರತ್ನ ಪುರಸ್ಕೃತರಾದ ಭೀಮ್​ಸೇನ್ ಜೋಶಿಯವರು, ಮಹಾರಾಷ್ಟ್ರ ಸರಕಾರದ ಗೌರವ ಪುರಸ್ಕಾರ, ತಾನ್ಸೇನ್ ಪುರಸ್ಕಾರ, ದೀನಾನಾಥ್ ಮಂಗೆಶ್ಕರ್ ಪುರಸ್ಕಾರ, ದೇಶಿಕೋತ್ತಮ ಪ್ರಶಸ್ತಿ, ಮಹಾರಾಷ್ಟ್ರದ ತಿಲಕ್ ವಿದ್ಯಾಪೀಠದಿಂದ ಡಿ.ಲಿಟ್ ಪದವಿ, ಪುಣೆ ಮಹಾನಗರ ಪಾಲಿಕೆಯ ಸನ್ಮಾನ, ಪುಣ್ಯಭೂಷಣ ಪ್ರಶಸ್ತಿ, ಮಹಾರಾಷ್ಟ್ರ ಸರಕಾರದ ಅತ್ಯುನ್ನತ ಪ್ರಶಸ್ತಿ ಮಹಾರಾಷ್ಟ್ರ ಭೂಷಣ ಗೌರವ, ಕೇರಳದ ಅತ್ಯುನ್ನತ ಸ್ವಾತಿ ತಿರುನಾಳ ಪ್ರಶಸ್ತಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್, ಕರ್ನಾಟಕದ ಅತ್ಯುನ್ನತ ಪ್ರಶಸ್ತಿ ಕರ್ನಾಟಕ ರತ್ನ, ದೆಹಲಿ ಸರಕಾರದ ಜೀವನ ಗೌರವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ..

Marjala manthana Bhimsen Joshi

ಇವಿಷ್ಟೇ ಅಲ್ಲ, ಪಂಡಿತ್ ಭೀಮ್​ಸೇನ್ ಜೋಶಿಯವರ ಪ್ರಶಸ್ತಿ ಪುರಸ್ಕಾರಗಳ ಪಟ್ಟಿ ದೊಡ್ಡದಿದೆ.. ಉಸ್ತಾದ್ ಬಡೇಗುಲಾಂ ಆಲೀಖಾನ್ ಪ್ರಶಸ್ತಿ, ಗಾಯನಾಚಾರ್ಯ’ಅಖಿಲಭಾರತೀಯ ಪ್ರಶಸ್ತಿ, ಗಂಧರ್ವ ಮಹಾವಿದ್ಯಾಲಯದ ಪ್ರಶಸ್ತಿ, ಸ್ವರ ಭಾಸ್ಕರ ಪ್ರಶಸ್ತಿ, ಶ್ರೀ.ರಾಘವೇಂದ್ರ ಸ್ವಾಮಿ ಪೀಠದಿಂದ ಸಂಗೀತ ರತ್ನ ಗೌರವ, ಮಿಯಾತಾನ್ ಸೇನ್ ಪ್ರಶಸ್ತಿ, ಜಯಪುರದ ಗಂಧರ್ವ ಮಹಾವಿದ್ಯಾಲಯದ ಸಂಗೀತಾಚಾರ್ಯ ಬಿರುದು, ನ್ಯಾಷನಲ್ ಫಿಲಂ ಫೆಸ್ಟಿವಲ್​​ನ ಸರ್ವೋತ್ತಮ ಪಾರ್ಷ್ವ ಗಾಯನ, ಮಹಾರಾಷ್ಟ್ರ ವಿಧಾನ ಪರಿಷತ್​ನ ಸನ್ಮಾನ, ಶ್ರೀಕೋನಾರವರಿಂದ ಸ್ಕೂಲ್ ಆಫ್ ಆನರ್ ಗೌರವ, ಗುಲ್ಬರ್ಗಾ ವಿದ್ಯಾಪೀಠದಿಂದ ಡಿ.ಲಿಟ್ ಪದವಿ, ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕೊಲ್ಕತ್ತದ ದಕ್ಷಿಣ ಬಾರ್ತಾ ಸಂಸ್ಥೆಯಿಂದ ಗೌರವ, ಕಾನ್ಪುರ ಮಹಾನಗರ ಪಾಲಿಕೆಯ ಅಭಿನಂದನಾ ಪತ್ರ, ರಾಮ ಸೇವಾ ಮಂಡಳಿ, ಬೆಂಗಳೂರು, ಸ್ವಾಮಿ ಹರಿವಲ್ಲಭದಾಸ್ ಪುರಸ್ಕಾರ, ಎಸ್.ವಿ.ನಾರಾಯಣ ಸ್ವಾಮಿ ರಾವ್ ರಾಷ್ಟ್ರೀಯ ಪುರಸ್ಕಾರ ಹೀಗೆ ಪಟ್ಟಿ ಮುಂದುವರೆಯುತ್ತದೆ.. ಪುಣೆಯ ವಿಶ್ವ ವಿದ್ಯಾಲಯದಲ್ಲಿ ಪಂಡಿತ್ ಭೀಮಸೇನ್ ಜೋಶಿ ಪೀಠ ಸ್ಥಾಪನೆ ಮಾಡುವ ಮೂಲಕ ಗೌರವ ಸಮರ್ಪಿಸಲಾಗಿದೆ..

ಅದೊಂದು ಕಚೇರಿ ನಡೆಯುತ್ತಿತ್ತು.. ಭೀಮಸೇನ ಜೋಶಿಯವರು ದಾಸರ ಪದ ಹಾಡಿದರು. ಹಾಡು ಮುಗಿಯುತ್ತಿದ್ದಂತೆ, ಪ್ರೇಕ್ಷಕರಲ್ಲಿ ಕೆಲವರು ‘ವಚನ, ವಚನ’, ಅನ್ನಲು ಶುರು ಮಾಡಿದರು.. ಅದಕ್ಕೆ ಭೀಮಸೇನರು ಕೊಟ್ಟ ಜವಾಬು, ‘ವಚನಾ ಹಾಡ್ಲಿಕ್ಕೆ ಬರೂದಿಲ್ಲ, ವಚನವನ್ನು ವಾಚನಾ ಮಾಡಬೇಕು!’.. ಮತ್ತೊಂದು ಕಚೇರಿಯಲ್ಲಿ ಶ್ರೋತೃಗಳಲ್ಲಿ ಕೆಲವರು ಕನ್ನಡದ ದಾಸರ ಹಾಡಿಗಾಗಿ, ಇನ್ನೂ ಕೆಲವರು ಮರಾಠಿಯ ‘ಅಭಂಗ್’ ಹಾಡಲು ಒತ್ತಾಯಿಸಿದ್ರು.. ಕೂಡಲೆ ಸಿಟ್ಟಿಗೆದ್ದ ಭೀಮಸೇನ್ ಜೋಶಿ, ‘ಸಂಗೀತಕ್ಕ ಭಾಷಾ ಇರೂದಿಲ್ಲ’ ಎಂದು ಖಡಕ್ಕಾಗಿ ಉತ್ತರಿಸಿದ್ದರು.. ಇದು ಭೀಮಸೇನ್ ಜೋಶಿಯವರ ನೇರ ಹಾಗೂ ನಿಷ್ಟುರ ವ್ಯಕ್ತಿತ್ವಕ್ಕೊಂದು ಉದಾಹರಣೆ..

ಭೀಮಸೇನ್ ಜೋಶಿಯವರಿಗೆ ಗಂಗೂಬಾಯಿ ಹಾನಗಲ್ ಎಂದರೆ ಎಲ್ಲಿಲ್ಲದ ಗೌರವ ಹಾಗೂ ಪ್ರೀತಿ.. ಹುಬ್ಬಳ್ಳಿ ಧಾರವಾಡದ ಸಂಗೀತಾಸಕ್ತರನ್ನು ಇವರಿಬ್ಬರನ್ನು ಆದರ್ಶ ಅಕ್ಕತಮ್ಮ ಎಂದೇ ಗುರುತಿಸಿ ಗೌರವಿಸುತ್ತಿದ್ದರು.. ದಕ್ಷಿಣ ಭಾರತದ ಸಂಗೀತ ಕ್ಷೇತ್ರದ ದಿಗ್ಗಜ ಬಾಲ ಮುರುಳಿ ಕೃಷ್ಣ ಹಾಗೂ ಗಾನಕೋಗಿಲೆ ಲತಾ ಮಂಗೇಷ್ಕರ್ ಜೊತೆ ಭೀಮಸೇನ್ ಜೋಶಿವರು ನಿಕಟ ಒಡನಾಟ ಹೊಂದಿದ್ದರು.. ಕೊನೆಯ ದಿನಗಳಲ್ಲಿ ತೀವ್ರ ಅನಾರೋಗ್ಯದಿಂದ ನರಳಿದ ಈ ಸ್ವರಕಿನ್ನರ, ಜನವರಿ 24, 2011ರಂದು ಇಹಲೋಕದ ಯಾತ್ರೆ ಮುಗಿಸಿದ್ರು.. ಇಂದು ಕರುನಾಡು ಕಂಡ ಅದ್ವಿತೀಯ ಸಂಗೀತಗಾರ, ಗಾನಕಲಾಧರ ಡಾ ಪಂಡಿತ್ ಭೀಮಸೇನ್ ಜೋಶಿಯವರ ಜನ್ಮಜಯಂತಿ.. ಅವರು ದೈಹಿಕವಾಗಿ ಮರೆಯಾದ್ರೂ ಭೀಮಸೇನ್ ಜೋಶಿಯವರ ರಾಗಸುಧೆಯ ಮಾಧುರ್ಯ ಮಾತ್ರ ಅಭಿಮಾನಿಗಳ ಮನಸಿನಲ್ಲಿ ಹಸಿರಾಗಿ ಉಳಿದಿದೆ..
ಭೀಮಸೇನ್ ಜೋಶಿ ಅಂದ ಕೂಡಲೇ ಅವರ ಕಿರಾನಾ, ಘರಾನಾ, ಖಯಾಲ್​ಗಳ ಜೊತೆ ಅವರ ಒಟ್ಟಾರೆ ದೈತ್ಯ ಸಾಧನೆಗಳು ಕಣ್ಮುಂದೆ ಬಂದು ನಿಲ್ಲುತ್ತವೆ.. ಅತ್ಯಂತ ಕಷ್ಟದಲ್ಲಿ ಊರೂರು ಅಲೆದು, ತಪಸ್ಸಿನಷ್ಟು ಶ್ರದ್ಧೆಯಿಂದ ಸಂಗೀತ ಕಲಿತು, ಕಲಿತ ರಾಗಸುಧೆಯನ್ನು ಶ್ರೋತೃಗಳ ಆತ್ಮಕ್ಕೆ ಹರಿಸಿ, ತಾವೂ ಧನ್ಯರಾಗಿ ಕೇಳುಗರನ್ನೂ ಧನ್ಯರಾಗಿಸಿದ ರಾಗ ಮಾಂತ್ರಿಕ ಭೀಮಸೇನ್ ಜೋಶಿ.. ಇಂತಹ ಅಪ್ರತಿಮ ಗಾಯಕ ನಮ್ಮವರು ಅನ್ನುವುದಕ್ಕೆ ನಮಗೆ ಯಾವಾಗಲೂ ಹೆಮ್ಮೆ..

ವಿಭಾ (ವಿಶ್ವಾಸ್ ಭಾರದ್ವಾಜ್)
***

ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd