ಮೀನುಪ್ರಿಯರಿಗೆ ಸಿಹಿಸುದ್ದಿ – ಬರಲಿದೆ ಮೀನಿನ ಚಿಪ್ಸ್
ಬೆಂಗಳೂರು, ಜೂನ್ 20: ಇಲ್ಲಿಯವರೆಗೆ ನಾವು ಆಲೂಗಡ್ಡೆ, ಗೆಣಸು, ಬಾಳೆಕಾಯಿ ಮತ್ತು ಇತರ ನಮೂನೆಯ ಚಿಪ್ಸ್ ಗಳನ್ನು ತಿಂದಿದ್ದೇವೆ. ಇನ್ನು ಮುಂದೆ ಮೀನಿನ ಚಿಪ್ಸ್ ಕೂಡ ನಮಗೆ ಮಾರುಕಟ್ಟೆಯಲ್ಲಿ ಸಿಗಲಿದೆ.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮವು ಮತ್ಸ್ಯ ಬಂಧನ ಸಂಸ್ಥೆಯ ಜೊತೆಗೂಡಿ ಕೊಂಡು ಮೀನು ಚಿಪ್ಸ್ ಗಳನ್ನು ತಯಾರಿಸಿ ಇನ್ನೊಂದು ವಾರಕ್ಕೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಮೀನಿನ ಚಟ್ನಿ, ಮೀನು ಮಸಾಲೆ, ಒಣ ಮೀನು ಮುಂತಾದ ಉತ್ಪನ್ನಗಳು ಹಸಿಮೀನಿನ ಜೊತೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಆ ಪಟ್ಟಿಗೆ ರುಚಿಯಾದ , ಪೌಷ್ಟಿಕಾಂಶಯುಕ್ತ ಮತ್ತು ಮೀನಿನ ವಾಸನೆರಹಿತ ಚಿಪ್ಸ್ ಗಳು ಸೇರ್ಪಡೆಯಾಗಲಿದೆ. ಮೀನಿನಲ್ಲಿ ಒಮೆಗಾ-3 ಕೊಬ್ಬು, ವಿಟಮಿನ್ ಡಿ ಮತ್ತು ಬಿ2 ಪೌಷ್ಟಿಕಾಂಶಗಳು ಅಧಿಕವಾಗಿದ್ದು, ಫ್ಯಾಟ್ ಅಂಶವನ್ನು ಹೊರತೆಗೆದು, ಮೀನಿನಲ್ಲಿನ ನೈಜ ಪೌಷ್ಟಿಕಾಂಶಗಳನ್ನು ಉಳಿಸಿಕೊಂಡು ಮೀನಿನ ಚಿಪ್ಸ್ ತಯಾರಿಸಲಾಗುವುದು. ಹಾಗಾಗಿ ಇದು ಬೇರೆ ಚಿಪ್ಸ್ ಗಳಂತೆ ಜಂಕ್ ಪುಡ್ ಎಂದು ಪರಿಗಣನೆಗೆ ಬಾರದೆ ಪೌಷ್ಟಿಕಾಂಶಯುಕ್ತ ಆಹಾರವಾಗಲಿದೆ ಎಂದು ಮತ್ಸ್ಯ ಬಂಧನ ಸಂಸ್ಥೆಯ ನಿರ್ದೇಶಕ ಅರುಣ್ ಧನಪಾಲ್ ಮಾಹಿತಿ ನೀಡಿದರು.
ಮೀನು ಚಿಪ್ಸ್ ಮುಂದಿನ ವಾರದಿಂದ ವಿವಿಧ ಪ್ಲೇವರ್ ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಪ್ಯಾಕ್ ಗೆ 30ರೂ ದರ ನಿಗದಿ ಪಡಿಸಲಾಗಿದೆ ಎಂದು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ತಿಳಿಸಿದೆ.