ಅಕ್ಟೋಬರ್ 17ರಿಂದ ಯುಎಇನಲ್ಲಿ ಟಿ-20 ವಿಶ್ವಕಪ್ – 2021 ಟೂರ್ನಿ ಆರಂಭ..!
2021ರ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಮುಹೂರ್ತ ಫಿಕ್ಸ್ ಆಗಿದೆ. ಆದ್ರೆ ಬಿಸಿಸಿಐ ಆತಿಥ್ಯ ವಹಿಸಲಿರುವ ಟಿ-ಟ್ವೆಂಟಿ ಟೂರ್ನಿಯನ್ನು ಭಾರತದಲ್ಲಿ ನಡೆಯುತ್ತಿಲ್ಲ. ಬದಲಾಗಿ ಯುಎಇನಲ್ಲಿ ಬಿಸಿಸಿಐ ಆಯೋಜನೆ ಮಾಡುತ್ತಿದೆ.
ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ. ಕೋವಿಡ್ ಸೋಂಕಿನ ಆತಂಕದಿಂದಾಗಿ ಪ್ರತಿಷ್ಠಿತ ಟೂರ್ನಿಯನ್ನು ಬಿಸಿಸಿಐ ಯುಎಇಗೆ ಶಿಫ್ಟ್ ಮಾಡುವ ನಿರ್ಧಾರ ತೆಗೆದುಕೊಂಡಿದೆ.
ಸೆಪ್ಟಂಬರ್ -ಅಕ್ಟೋಬರ್ ನಲ್ಲಿ 2021ನೇ ಸಾಲಿನ ಐಪಿಎಲ್ ಭಾಗ -2 ನಡೆಯಲಿದೆ. ಅಕ್ಟೊಬರ್ 15ರಂದು ಫೈನಲ್ ಪಂದ್ಯ ನಡೆಯಲಿದೆ.
ಐಪಿಎಲ್ ಮುಗಿದ ಎರಡು ದಿನದಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯಲಿದೆ. ಅಕ್ಟೋಬರ್ 17ರಿಂದ ಆರಂಭಗೊಂಡು, ನವೆಂಬರ್ 14ರಂದು ಫೈನಲ್ ಪಂದ್ಯ ನಡೆಯಲಿದೆ.
ಈ ಬಾರಿಯ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ.
ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಅಫಘಾನಿಸ್ತಾನ ತಂಡಗಳು ಟಾಪ್ ಎಂಟರಲ್ಲಿ ಸ್ಥಾನ ಪಡೆದುಕೊಂಡಿವೆ.
ಮೊದಲ ಹಂತದಲ್ಲಿ 12 ಪಂದ್ಯಗಳು ನಡೆಯಲಿವೆ. ಇದರಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್, ಐರ್ಲೆಂಡ್, ಸ್ಕಾಟ್ ಲೆಂಡ್, ನಮೀಬಿಯಾ, ಒಮನ್, ಪಪುವಾ ನ್ಯೂ ಜಿನಿಯಾ ತಂಡಗಳು ಸ್ಪರ್ಧಿಸಲಿವೆ. ಎರಡು ಬಣದ ಅಗ್ರ ಎರಡು ತಂಡಗಳು ಸೂಪರ್ -12ರಲ್ಲಿ ಸ್ಥಾನಪಡೆದುಕೊಳ್ಳಲಿವೆ.
ಸೂಪರ್ -12ರಲ್ಲಿ ಒಟ್ಟು 30 ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳು ಅಕ್ಟೋಬರ್ 24ರಿಂದ ಆರಂಭವಾಗಲಿವೆ. ದುಬೈ, ಅಬುಧಾಬಿ ಮತ್ತು ಶಾರ್ಜಾ ಮೈದಾನಗಳಲ್ಲಿ ಪಂದ್ಯಗಳನ್ನು ಆಯೋಜನೆ ಮಾಡಲಾಗುತ್ತಿದೆ.