ಪಾಕ್ ವಿರುದ್ಧ ಸೋತ ಟೀಮ್ ಇಂಡಿಯಾ ಫೈನಲ್ ಲೆಕ್ಕಾಚಾರ ಹೇಗೆ..? ಇನ್ನೊಂದು ಮ್ಯಾಚ್ ಸೋತ್ರೂ ಕಪ್ ಆಸೆಗೆ ತಣ್ಣೀರು..?
ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಹೀನಾಯವಾಗಿ ಕಳೆದುಕೊಂಡ ಬಳಿಕ ಅಭಿಮಾನಿಗಳು ಕಂಗಾಲಾಗಿದ್ದಾರೆ. 14 ವರ್ಷಗಳ ಬಳಿಕ ವಿಶ್ವಕಪ್ ಎತ್ತುವ ಟೀಮ್ ಇಂಡಿಯಾದ ಪ್ಲಾನ್ ಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಹಾಗಂತ ಒಂದು ಪಂದ್ಯ ಸೋತ ತಕ್ಷಣ ಎಲ್ಲವೂ ಮುಗೀತು ಎಂದಲ್ಲ. ಆದರೆ ಸುಲಭ ಅನ್ನುವಂತಹದ್ದು ಕಷ್ಟ ಅನ್ನುವಂತಾಗಿದೆ. ಯಾಕಂದ್ರೆ ಮುಂದಿನ ಎಲ್ಲಾ ಪಂದ್ಯಗಳಲ್ಲೂ ಲೆಕ್ಕಾಚಾರದಂತೆಯೇ ಆಡಬೇಕು. ಇನ್ನೊಂದು ಸೋಲು ಟೀಮ್ ಇಂಡಿಯಾವನ್ನು ಟೂರ್ನಿಯಿಂದಲೇ ಹೊರಗಟ್ಟಬಲ್ಲದು.
ನ್ಯೂಜಿಲೆಂಡ್ ವಿರುದ್ಧ ನಿರ್ಣಾಯಕ ಪಂದ್ಯ..!
ಟೀಮ್ ಇಂಡಿಯಾ ಟಿ20 ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಇಲ್ಲಿ ತನಕ ಪಂದ್ಯ ಗೆದ್ದಿಲ್ಲ. ಮುಂದಿನ ಪಂದ್ಯವನ್ನು ವಿರಾಟ್ ಬಳಗ ಕಿವೀಸ್ ವಿರುದ್ಧ ಅಕ್ಟೋಬರ್ 31ರಂದು ಆಡಲಿದೆ. ಒಂದು ವೇಳೆ ನ್ಯೂಜಿಲೆಂಡ್ ವಿರುದ್ಧದ ಸೋಲಿನ ಇತಿಹಾಸ ಬದಲಾಗದಿದ್ದರೆ ಟೀಮ್ ಇಂಡಿಯಾ ಗ್ರೂಪ್ ಹಂತದಲ್ಲೇ ವಿಶ್ವಕಪ್ ಗೆ ಗುಡ್ ಬೈ ಹೇಳುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಭಾನುವಾರವೇ ಟೀಮ್ ಇಂಡಿಯಾದ ಭವಿಷ್ಯ ವಿಶ್ವಕಪ್ ನಲ್ಲಿ ನಿರ್ಣಯವಾಗಲಿದೆ.
ಅಫ್ಘಾನಿಸ್ತಾನದಿಂದ ಚಾಲೆಂಜ್ ಗ್ಯಾರೆಂಟಿ
ಗ್ರೂಪ್ ಬಿ ನಲ್ಲಿ ಅಫ್ಘಾನಿಸ್ತಾನ ಮೇಲ್ನೋಟಕ್ಕೆ ಟೀಮ್ ಇಂಡಿಯಾಕ್ಕಿಂತ ದುರ್ಬಲ ತಂಡ. ಆದರೆ ಆ ತಂಡದ ವಿರುದ್ಧ ಸುಲಭವಾದ ಗೆಲುವು ಕಷ್ಟ. ಇತ್ತೀಚಿನ ದಿನಗಳಲ್ಲಿ ಅಫ್ಘಾನ್ ತಂಡ ಟಿ20 ಕ್ರಿಕೆಟ್ನಲ್ಲಿ ಉತ್ತಮ ಆಟ ಆಡುತ್ತಿದೆ. ಹೀಗಾಗಿ ಅಫ್ಘಾನಿಸ್ತಾನದ
ವಿರುದ್ಧ ಟೀಮ್ ಇಂಡಿಯಾ ಎಚ್ಚರಿಕೆಯ ಆಟವಾಡಿ ಗೆಲುವು ದಾಖಲಿಸಬೇಕಿದೆ.
ಗ್ರೂಪ್ನಲ್ಲಿ ನಮೀಬಿಯಾ, ಸ್ಕಾಟ್ ಲೆಂಡ್ ವೀಕ್ ಎದುರಾಳಿ
ಟೀಮ್ ಇಂಡಿಯಾ ಬಿ ಗ್ರೂಪ್ ನಲ್ಲಿ ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ನಮೀಬಿಯಾ ಮತ್ತು ಸ್ಕಾಟ್ ಲೆಂಡ್ ಜೊತೆಗೆ ಸ್ಥಾನ ಪಡೆದಿತ್ತು. ಈ ಗ್ರೂಪ್ ನಲ್ಲಿ ಸ್ಕಾಟ್ ಲೆಂಡ್ ಮತ್ತು ನಮೀಬಿಯಾ ಮಾತ್ರ ಸುಲಭ ಎದುರಾಳಿ ಅನ್ನುವ ಲೆಕ್ಕಾಚಾರವಿದೆ. ಈ ಎರಡೂ ತಂಡಗಳ ವಿರುದ್ಧ ವಿರಾಟ್ ಬಳಗ ದೊಡ್ಡ ಗೆಲುವು ದಾಖಲಿಸಿದರೆ ಮಾತ್ರ ರನ್ ರೇಟ್ ನಲ್ಲಿ ಮುಂದೆ ಬರಬಹುದು. ಒಟ್ಟಿನಲ್ಲಿ ಒಂದು ಸೋಲು ಟೀಮ್ ಇಂಡಿಯಾದ ಆತ್ಮವಿಶ್ವಾಸಕ್ಕೆ ಹೊಡೆತ ನೀಡಿದ ಜೊತೆಗೆ ಲೆಕ್ಕಾಚಾರಕ್ಕೂ ಮಹತ್ವ ಬರುವ ಹಾಗೆ ಮಾಡಿದೆ.