ಫೈನಲ್ ಪ್ರವೇಶಕ್ಕೆ ಪಾಕ್- ಆಸೀಸ್ ಫೈಟ್- ದುಬೈನಲ್ಲಿ ಗೆಲ್ಲೋದಿಕ್ಕೆ ರಣತಂತ್ರ..!
ಅತ್ತ ಪಾಕಿಸ್ತಾನ, ಇತ್ತ ಆಸ್ಟ್ರೇಲಿಯಾ.. ಎರಡೂ ಬಲಿಷ್ಠ ತಂಡಗಳೇ. ಆದರೆ ಈ ವಿಶ್ವಕಪ್ನಲ್ಲಿ ಪ್ರದರ್ಶನ ಮಾತ್ರ ವಿಭಿನ್ನವಾಗಿದೆ.
ಪಾಕಿಸ್ತಾನ ಯುಎಇನಲ್ಲಿ ಸೋಲು ಕಂಡ ಇತಿಹಾಸವೇ ಇಲ್ಲ. ಸೂಪರ್ 12ರ ಗ್ರೂಪ್ 2ರಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ.
ಇನ್ನೊಂದು ಕಡೆ ಆಸ್ಟ್ರೇಲಿಯಾ ಅದ್ಭುತ ಪ್ರದರ್ಶನ ಜೊತೆಗೆ ಅದೃಷ್ಟ ಕೈ ಹಿಡಿದ ಕಾರಣ ಸೆಮಿಫೈನಲ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಈಗ ರಿಯಲ್ ಫೈಟ್ಗೆ ವೇದಿಕೆ ದುಬೈನಲ್ಲಿ ಸಿದ್ಧವಾಗಿದೆ. ಗೆದ್ದವರು ಫೈನಲ್ಗೆ, ಸೋತವರು ಮನೆಗೆ ಅನ್ನುವ ಸ್ಥಿತಿ ನಿರ್ಮಾಣವಾಗಿದೆ.
ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡದ ಬ್ಯಾಲೆನ್ಸ್ನಲ್ಲಿ ಹೆಚ್ಚು ವ್ಯತ್ಯಾಸಗಳಿಲ್ಲ. ಡೇವಿಡ್ ವಾರ್ನರ್ ಮತ್ತು ಆ್ಯರೋನ್ ಫಿಂಚ್ ಫಾರ್ಮ್ ಕಂಡುಕೊಂಡಿರುವು ಆಸೀಸ್ಗೆ ಬೋನಸ್.
ಮಿಚೆಲ್ ಮಾರ್ಷ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಕ್ರೀಸ್ನಲ್ಲಿ ಇರುವಷ್ಟು ಹೊತ್ತು ಡೇಂಜರಸ್. ಸಂಕಷ್ಟ ಬಂದರೆ ಸ್ಟೀವನ್ ಸ್ಮಿತ್ ಇದ್ದಾರೆ.
ಮಾರ್ಕಸ್ ಸ್ಟೋಯ್ನಿಸ್ ಮತ್ತು ಮ್ಯಾಥ್ಯೂ ವೇಡ್ ಚೆನ್ನಾಗಿ ಇನ್ನಿಂಗ್ಸ್ ಫಿನಿಷ್ ಮಾಡಬಲ್ಲರು. ಬೌಲಿಂಗ್ನಲ್ಲೂ ಕಾಂಗರೂಗಳಿಗೆ ಸಮಸ್ಯೆ ಇಲ್ಲ.
ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಜಲ್ವುಡ್ ವಿಕೆಟ್ ಬೇಟೆಯಲ್ಲಿದ್ದಾರೆ. ಪ್ಯಾಟ್ ಕಮಿನ್ಸ್ ವಿಕೆಟ್ ಪಡೆಯದೇ ಇದ್ದರೂ ಡೇಂಜರಸ್.
ಆ್ಯಡಂ ಜಂಪಾ ಸ್ಪಿನ್ ಮೋಡಿಗಾರ. ಮಾರ್ಷ್, ಸ್ಟೋಯ್ನಿಸ್ ಮತ್ತು ಮ್ಯಾಕ್ಸ್ವೆಲ್ ಸೇರಿಕೊಂಡು 5ನೇ ಬೌಲರ್ ಕೆಲಸ ಮುಗಿಸಬಲ್ಲರು.
ಪಾಕ್ ತಂಡ ಕೂಡ ಅಪಾಯಕಾರಿ. ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ರನ್ ಮಷಿನ್ಗಳು.
ಫಕರ್ ಜಮಾನ್ ರನ್ ಬರ ಎದುರಿಸ್ತಾ ಇದ್ದರೂ, ಹಫೀಜ್ ಮತ್ತು ಶೋಯೆಬ್ ಮಲಿಕ್ ಅನುಭವ ತಂಡಕ್ಕಿದೆ.
ಅಸೀಫ್ ಅಲಿ ಫಿನಿಷರ್ ಕಾರ್ಯ ಮಾಡುತ್ತಿದ್ದಾರೆ. ಬೌಲಿಂಗ್ನಲ್ಲಿ ಶಾಹಿನ್ ಅಫ್ರಿಧಿ, ಹಸನ್ ಅಲಿ ಮತ್ತು ಹ್ಯಾರಿಸ್ ರೌಫ್ ಮಿಂಚುತ್ತಿದ್ದಾರೆ. ಇಮಾದ್ ವಾಸಿಂ ಮತ್ತು ಶದಾಬ್ ಖಾನ್ ಸ್ವ್ಪಿನ್ ಬೌಲರ್ಗಳು.
ಎರಡೂ ತಂಡಗಳ ಬಲಾಬಲ ನೋಡುತ್ತಿದ್ದರೆ ಯಾವುದಕ್ಕೂ ಕಡಿಮೆ ಇಲ್ಲ. ದುಬೈನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಟಾಸ್ ಹಾಗೂ ಡ್ಯೂ ಫ್ಯಾಕ್ಟರ್ ಮೇಲೆ ಕಣ್ಣಿದೆ.
ಒಟ್ಟಿನಲ್ಲಿ ಫೈನಲ್ ಪ್ರವೇಶಕ್ಕಾಗಿ ಎರಡೂ ತಂಡಗಳ ನಡುವೆ ರಣ ರೋಚಕ ಕದನವೇ ನಡೆಯಲಿದೆ.