ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ ಜಯಲಲಿತಾ ಆಪ್ತೆ ಹಾಗೂ ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ವಿ.ಕೆ ಶಶಿಕಲಾಗೆ ಅವಧಿಗೂ ಮುನ್ನವೇ ಬಿಡುಗಡೆ ಭಾಗ್ಯ ಸಿಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.
ತಮಿಳರ ಪಾಲಿನ ಅಮ್ಮ ಜಯಲಲಿತಾ ಆಗಿದ್ದರೆ, ಜಯಲಲಿತಾ ನಂತರ ಚಿನ್ನಮ್ಮ ಎಂದೇ ತಮಿಳುನಾಡಿನಲ್ಲಿ ಹವಾ ಉಳಿಸಿಕೊಂಡಿದ್ದ ವಿ.ಕೆ ಶಶಿಕಲಾ ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಅವರ ಪರ ವಕೀಲ ಎನ್.ರಾಜಾ ಸೆಂತೂರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2017ರ ಫೆಬ್ರವರಿಯಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ವಿ.ಕೆ ಶಶಿಕಲಾ ಅವರಿಗೆ ಕೋರ್ಟ್ ಆದೇಶದ ಪ್ರಕಾರ ಸೆರೆವಾಸದ ಅವಧಿ 2021ರ ಜನವರಿ 27ರಂದು ಕೊನೆಗೊಳ್ಳಲಿದೆ.
ಆದರೆ, ಸನ್ನಡೆತೆಯ ಆಧಾರದ ಖೈದಿಗಳಿಗೆ ಪ್ರತಿ ವರ್ಷ 36 ದಿನಗಳ ಶಿಕ್ಷೆಯ ವಿನಾಯಿತಿ ನೀಡಲಾಗುತ್ತದೆ. ವಿ.ಕೆ ಶಶಿಕಲಾ ತಮ್ಮ ಮೂರು ವರ್ಷಗಳ ಆವಧಿಯಲ್ಲಿ ಸನ್ನಡೆತೆಯ ಅಧಾರದ ಮೇಲೆ 129 ದಿನಗಳ ಶಿಕ್ಷೆಯ ವಿನಾಯಿತಿಗೆ ಅರ್ಹರಾಗಿದ್ದಾರೆ. ಹೀಗಾಗಿ ಈ ತಿಂಗಳಾಂತ್ಯಕ್ಕೆ ವಿ.ಕೆ ಶಶಿಕಲಾ ಅವರ ಶಿಕ್ಷೆಯ ಅವಧಿ ಕೊನೆಗೊಳ್ಳಲಿದ್ದು, ಜೈಲಿನಿಂದ ಹೊರಬರಲಿದ್ದಾರೆ ಎಂದು ವಕೀಲ ರಾಜಾ ತಿಳಿಸಿದ್ದಾರೆ.
ನ್ಯಾಯಾಲಯದ ಆದೇಶದಂತೆ 10 ಕೋಟಿ ದಂಡ ಪಾವತಿಸಬೇಕಿದೆ. ಈ ದಂಡದ ಹಣ ಪಾವತಿಗೆ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಜಾ ಹೇಳಿದ್ದಾರೆ.
2021ಕ್ಕೆ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಜಯಲಲಿತಾ ನಿಧನದ ನಂತರ ಜೈಲಿಗೆ ಹೋಗುವ ಮುನ್ನ ಆಡಳಿತಾರೂಢ ಎಐಡಿಎಂಕೆ ಪಕ್ಷವನ್ನೇ ಹೈಜಾಕ್ ಮಾಡಿದ್ದ ವಿ.ಕೆ ಶಶಿಕಲಾ ತಮಿಳುನಾಡಿನಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದ್ದರು. ಜಯಲಲಿತಾ ಅಮ್ಮನಾದರೆ, ಜಯಲಲಿತಾ ನಂತರ ತಾನು ಚಿನ್ನಮ್ಮ ಎಂದು ಬಿಂಬಿಸಿಕೊಂಡಿದ್ದ ಶಶಿಕಲಾ, ಎಐಡಿಎಂಕೆ ಪಕ್ಷವನ್ನು ತನ್ನ ಕಂಟ್ರೋಲ್‍ನಲ್ಲಿ ಇಟ್ಟುಕೊಂಡಿದ್ದರು.
ಹಂಗಾಮಿ ಮುಖ್ಯಮಂತ್ರಿಯಾಗಿದ್ದ ಓ.ಪನ್ನೀರ್ ಸೆಲ್ವಂ ಕಿತ್ತುಹಾಕಿ ಆ ಸ್ಥಾನಕ್ಕೆ ಯಡಪ್ಪಾಡಿ ಪಳನಿಸ್ವಾಮಿ ಅವರನ್ನು ಕೂರಿಸಿದ್ದರು. ಆದರೆ, ಶಶಿಕಲಾ ವಿರುದ್ಧ ಪನ್ನೀರ್ ಸೆಲ್ವಂ ಬಂಡಾಯವೆದ್ದು, ಎಐಎಡಿಎಂಕೆಯಲ್ಲಿ ಎರಡು ಬಣಗಳು ರೂಪುಗೊಂಡಿದ್ದವು. ಆದರೆ, ಶಶಿಕಲಾ ಅವರಿಗೆ ಅದೃಷ್ಟ ಕೈಕೊಟ್ಟಿತ್ತು. ಸುಪ್ರೀಂಕೋರ್ಟ್ ಶಶಿಕಲಾ ಜೈಲು ಶಿಕ್ಷೆಯನ್ನು ಖಾಯಂಗೊಳಿಸಿ ಆದೇಶ ಹೊರಡಿಸಿದ ಪರಿಣಾಮ ಪರಪ್ಪನ ಅಗ್ರಹಾರ ಜೈಲು ಸೇರಬೇಕಾಯಿತು.
ಆದರೆ, ಚುನಾವಣೆಗೂ ಮುನ್ನವೇ ವಿ.ಕೆ ಶಶಿಕಲಾ ತಮಿಳುನಾಡಿಗೆ ಎಂಟ್ರಿ ಕೊಡುತ್ತಿರುವುದು ಮತ್ತೆ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆ ಇದೆ. ಶಶಿಕಲಾ ಜೈಲಿಗೆ ಹೋಗುವ ಮುನ್ನ ವಿರೋಧಿಗಳಾಗಿದ್ದ ಓ.ಪನ್ನೀರ್ ಸೆಲ್ವಂ ಹಾಗೂ ಸಿಎಂ ಪಳನಿಸ್ವಾಮಿ ಒಂದುಗೂಡುವ ಮೂಲಕ ಮತ್ತೆ ರಾಜಕೀಯ ದೃವೀಕರಣಕ್ಕೆ ಕಾರಣರಾಗಿದ್ದಾರೆ. ಪರಿಣಾಮ ವಿ.ಕೆ ಶಶಿಕಲಾ ಅವರನ್ನೇ ಪಕ್ಷದಿಂದ ಉಚ್ಛಾಟಿಸಿದ್ದರು. ಹೀಗಾಗಿ ಶಶಿಕಲಾ ತಮಿಳುನಾಡಿಗೆ ಎಂಟ್ರಿ ಕೊಡುತ್ತಿರುವುದು ಆಡಳಿತಾರೂಢ ಎಐಎಡಿಎಂಕೆ ಪಕ್ಷದಲ್ಲಿ ನಡುಕ ಸೃಷ್ಟಿಸಿರುವುದಂತೂ ನಿಜ.