ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಕುರಿತು ಜ್ಞಾಪನ ಪತ್ರ ಹೊರಡಿಸಲಾಗಿದೆ. ಆಯ್ಕೆಯಾಗಿರುವ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಈ ಮೂಲಕ ಸೂಚನೆ ನೀಡಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ 1:1 ಅನುಪಾತದ ಅಂತಿಮ ಆಯ್ಕೆ ಪಟ್ಟಿಯನ್ನು ಇಲಾಖಾ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. 26 ಜಿಲ್ಲೆಗಳಲ್ಲಿ ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಆಯ್ಕೆಯಾಗಿರುವ ಎಲ್ಲ ಅಭ್ಯರ್ಥಿಗಳ ಮೂಲ ದಾಖಲೆಗಳ ನೈಜತ್ವ ಪರಿಶೀಲನೆ ಕಾರ್ಯಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.
ಕಲಬುರಗಿ, ಬೀದರ್, ಬಳ್ಳಾರಿ, ವಿಜಯನಗರ, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳು ಮತ್ತು ಬಿಬಿಎಂಪಿ ವ್ಯಾಪ್ತಿಯ ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮೂಲ ದಾಖಲೆ ಪರಿಶೀಲನೆ ನಡೆಯಲಿದೆ. 1:1 ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಎಲ್ಲಾ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ಸಹ ಪರಿಶೀಲನೆ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲು ತಿಳಿಸಲಾಗಿದೆ.