ಬೆಂಗಳೂರು: ಮಕರ ಸಂಕ್ರಾಂತಿ ಮುನ್ನಾದಿನ ಬುಧವಾರ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮ್ಮನ್ನು ಕಡೆಗಣಿಸಿ ಸಚಿವ ಸ್ಥಾನ ನೀಡದಿರುವುದಕ್ಕೆ ಕೊತಕೊತ ಕುದಿಯುತ್ತಿರುವ ಅತೃಪ್ತ ಶಾಸಕರು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಅಮಿತ್ ಶಾಗೆ ದೂರು ನೀಡಲು ಸಜ್ಜಾಗಿದ್ದಾರೆ.
ಇಂದು ಹಾಗೂ ನಾಳೆ ಎರಡು ದಿನಗಳ ಕಾಲ ರಾಜ್ಯ ಭೇಟಿಗೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇಂದು ಸಂಜೆ ಬಿಜೆಪಿ ಕೋರ್ ಕಮಿಟಿ ಸಭೆ ಹಾಗೂ ನಾಳೆ ಬೆಳಗಾವಿಯಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ ಹೊರಹಾಕಿರುವ ಅತೃಪ್ತ ಶಾಸಕರ ಟೀಂ, ಅಮಿತ್ ಶಾ ಅವರನ್ನು ಇಂದು ಅಥವಾ ನಾಳೆ ಭೇಟಿ ಮಾಡಿ ದೂರು ನೀಡಲು ನಿರ್ಧರಿಸಿದ್ದಾರೆ.
ಸಂಪುಟದಲ್ಲಿ ಸಚಿವ ಸ್ಥಾನದ ಸಿಗದೇ ಇರುವುದು, ಬಿಎಸ್ವೈ ಪುತ್ರ ವಿಜಯೇಂದ್ರ ಆಡಳಿತ ಹಾಗೂ ಪಕ್ಷದಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದು, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ದೂರು ನೀಡಲಿದ್ದಾರೆ ಎನ್ನಲಾಗುದೆ.
ಅಮಿತ್ ಶಾ ಭೇಟಿಗೆ ಸಮಯ ಹೇಳಿದ್ದೇನೆ ಎಂದು ಎಂಎಲ್ಸಿ ಹೆಚ್.ವಿಶ್ವನಾಥ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಅಭಯ್ ಪಾಟೀಲ್, ಅರವಿಂದ ಬೆಲ್ಲದ್, ಸಿದ್ದು ಸವದಿ, ಯತ್ನಾಳ್ ಸೇರಿದಂತೆ 10ಕ್ಕೂ ಹೆಚ್ಚು ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರಿಗೆ ದೂರು ನೀಡಲು ತೀರ್ಮಾನಿಸಿದ್ದರು. ಇದೀಗ ದೆಹಲಿಗೆ ತೆರಳುವ ನಿರ್ಧಾರ ಬದಲಿಸಿ ಅಮಿತ್ ಶಾ ಅವರಿಗೆ ಕರ್ನಾಟಕದಲ್ಲಿಯೇ ದೂರು ನೀಡಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.
ಸಚಿವ ಸ್ಥಾನ ಸಿಗದೇ ಇದ್ದವರು ಬಹಿರಂಗ ಹೇಳಿಕೆ ನೀಡುವ ಬದಲು ಹೈಕಮಾಂಡ್ ನಾಯಕರಿಗೆ ದೂರು ನೀಡಲಿ, ನನ್ನದೇನೂ ಅಭ್ಯಂತರ ಇಲ್ಲ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೀಡಿದ ಹೇಳಿಕೆಯೂ ಕೂಡ ಅತೃಪ್ತ ಬಣಕ್ಕೆ ಅಸ್ತ್ರವಾಗಿ ಸಿಕ್ಕಿದೆ. ಹೀಗಾಗಿ ಬೆಂಗಳೂರು ಅಥವಾ ಬೆಳಗಾವಿಯಲ್ಲಿ ದೂರು ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel