Telangana : ಸಾಮೂಹಿಕ ಅತ್ಯಾಚಾರದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ 23 ವರ್ಷದ ಯುವತಿ
ತೆಲಂಗಾಣ : 23 ವರ್ಷದ ಯುವತಿಯೊಬ್ಬಳು ಸಾಮೂಹಿಕ ಅತ್ಯಾಚಾರದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಮೆಹಬೂಬಾಬಾದ್ ನಲ್ಲಿ ನಡೆದಿದೆ..
ಈಕೆಯ ಮೇಲೆ ಪೊಲೀಸ್ ಪೇದೆಯೂ ಸೇರಿದಂತೆ ಒಟ್ಟು ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ್ದರಿಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈ ಕುರಿತಂತೆ ಮಹಬೂಬಾಬಾದ್ ಜಿಲ್ಲೆಯ ನೆಲ್ಲಿಕುದೂರು ಪೊಲೀಸ್ ಠಾಣೆಯಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಫೆಬ್ರವರಿ 16 ರಂದು ಸಂತ್ರಸ್ತೆ ರಾತ್ರಿ ತಂಗಲು ತನ್ನ ಸ್ನೇಹಿತೆಯ ಮನೆಗೆ ಹೋಗುವ ವೇಳೆ ಆಕೆಯನ್ನ ಎಳೆದೊಯ್ದ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಮತ್ತೆ ಫೆಬ್ರವರಿ 17 ರಂದು ಅದೇ ಸ್ನೇಹಿತೆಯನ್ನು ಭೇಟಿಯಾಗಲು ಹೋಗುವ ವೇಳೆ ಮತ್ತೊಮ್ಮೆ ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ.
ಫೆಬ್ರವರಿ 18 ರಂದು ಮನೆಗೆ ಹಿಂದಿರುಗಿದ ಯುವತಿ ಬೆಳಗ್ಗೆ 8 ಗಂಟೆಗೆ ವಿಷ ಸೇವಿಸಿದ್ದಾಳೆ. ನಂತರ ಕೂಡಲೇ ಆಕೆಯ ಸಹೋದರ ಮಹಬೂಬಾಬಾದ್‍ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಸಂತ್ರಸ್ತೆ ಫೆಬ್ರವರಿ 22 ರಂದು ನಿಧನರಾಗಿದ್ದು, ಫೆಬ್ರವರಿ 17 ಮತ್ತು 18 ರಂದು ನಾಲ್ವರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರಿಂದ ವಿಷ ಸೇವಿಸಿರುವುದಾಗಿ ಕುಟುಂಬಸ್ಥರ ಬಳಿ ಸಾಯುವ ಮುನ್ನ ಹೇಳಿಕೊಂಡಿದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ ಎನ್ನಲಾಗಿದೆ.
ಆರೋಪಿಗಳಲ್ಲಿ ಒಬ್ಬ ಪೊಲೀಸ್ ಪೇದೆ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಮಂಡಲ ಪರಿಷತ್ ಪ್ರಾದೇಶಿಕ ಕ್ಷೇತ್ರದ ಸದಸ್ಯೆಯ ಪತಿ ಎಂದು ಹೇಳಲಾಗಿದೆ.
ಇದೀಗ ಪೊಲೀಸರು ಮೂವರು ಆರೋಪಿಗಳನ್ನು ವಶಪಡಿಸಿಕೊಂಡಿದ್ದು, ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.








