ರೈತ ಚಳುವಳಿಯಲ್ಲಿ ಮಡಿದ ಪಂಜಾಬಿ ರೈತರಿಗೆ ತೆಲಂಗಾಣ ಸಿಎಂ ಕೆ ಸಿ ಆರ್ ಸಹಾಯ ಧನ
ಕೃಷಿ ಕಾಯ್ದೆಗಳನ್ನ ವಿರೋಧಿಸಿ ದೆಹಲಿ ಗಡಿಯಲ್ಲಿ ನಡೆದ ರೈತ ಚಳವಳಿಯಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ 3 ಲಕ್ಷ ರೂ.ಗಳ ಸಹಾಯ ಧನವನ್ನ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ನೀಡಲಿದ್ದಾರೆ.
ಚಂಡೀಗಢದಲ್ಲಿ ಇಂದು ನಡೆಯುವ ಕಾರ್ಯಕ್ರಮದಲ್ಲಿ ಈ ಸಹಾಯವನ್ನ ನೀಡಲಿದ್ದು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಅವರೊಂದಿಗೆ ಭಾಗವಹಿಸಲಿದ್ದಾರೆ. ಕಳೆದ ವರ್ಷ ಆಂದೋಲನ ಮುಗಿದ ಮರುದಿನವೇ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಈ ಘೋಷಣೆ ಮಾಡಿದ್ದರು. ಈ ಕಾರ್ಯಕ್ರಮವನ್ನು ಚಂಡೀಗಢದ ಟ್ಯಾಗೋರ್ ಥಿಯೇಟರ್‌ನಲ್ಲಿ ಏರ್ಪಡಿಸಲಾಗಿದೆ.
ಪಂಜಾಬ್‌ನ 600 ರೈತರು ಪ್ರಾಣ ಕಳೆದುಕೊಂಡಿದ್ದರು
ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಆಂದೋಲನ ನಡೆಯಿತು. 378 ದಿನಗಳ ಕಾಲ ನಡೆದ ರೈತರ ಆಂದೋಲನದಲ್ಲಿ ಸುಮಾರು 700 ರೈತರು ಸಾವನ್ನಪ್ಪಿದ್ದಾರೆ. ಇವರಲ್ಲಿ 600 ರೈತರು ಪಂಜಾಬಿನವರಾಗಿದ್ದರು.
ನಂತರ ಪ್ರಧಾನಿ ನರೇಂದ್ರ ಮೋದಿ ಈ ಕಾನೂನುಗಳನ್ನು ಹಿಂಪಡೆದರು. ಮರುದಿನವೇ ತೆಲಂಗಾಣ ಸಿಎಂ ರೈತ ಕುಟುಂಬಗಳಿಗೆ ಆರ್ಥಿಕ ನೆರವು ಘೋಷಿಸಿದರು. ಪಂಜಾಬ್ ಸರ್ಕಾರ ಈಗಾಗಲೇ ಈ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ಮತ್ತು ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದೆ.