ಹೈದರಾಬಾದ್ : ಮಾಜಿ ಪ್ರಧಾನ ಮಂತ್ರಿ ಪಿ.ವಿ.ನರಸಿಂಹರಾವ್ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರುವ ಬಗ್ಗೆ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.
ನರಸಿಂಹರಾವ್ ಅವರ ಜನ್ಮ ಶತಮಾನೋತ್ಸವದ ಕುರಿತು ಕೆಸಿಆರ್ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಮಾಜಿ ಪ್ರಧಾನಮಂತ್ರಿ ಪಿ.ವಿ ನರಸಿಂಹರಾವ್ ಅವರ ಭಾವಚಿತ್ರವನ್ನು ಸಂಸತ್ ನಲ್ಲಿ ಸ್ಥಾಪಿಸಲು ಮತ್ತು ಹೈದರಾಬಾದ್ನ ಕೇಂದ್ರ ವಿಶ್ವವಿದ್ಯಾಲಯವನ್ನು ಮರು ನಾಮಕರಣ ಮಾಡುವಂತೆ ಕೇಂದ್ರವನ್ನು ಕೋರುತ್ತೇವೆ ಎಂದು ತಿಳಿಸಿದರು.
ಮುಂದುವರಿದು, “ಪಿ.ವಿ.ನರಸಿಂಹರಾವ್ ತೆಲಂಗಾಣದ ಅಸ್ತಿತ್ವದ ಸಂಕೇತವಾಗಿದ್ದಾರೆ. ಅವರು ದೇಶದಲ್ಲಿ ಹಲವಾರು ಸುಧಾರಣೆಗಳನ್ನು ಪ್ರಾರಂಭಿಸಿದ ಸುಧಾರಕರಾಗಿದ್ದಾರೆ. ಅವರು ವಿಶ್ವದಾದ್ಯಂತ ಶ್ರೇಷ್ಠ ಬುದ್ಧಿಜೀವಿಗಳೆಂದು ಗುರುತಿಸಲ್ಪಟ್ಟರು. ದೇಶದ ಪ್ರಧಾನಮಂತ್ರಿ ಪಟ್ಟಕ್ಕೆ ಏರಿದ ತೆಲಂಗಾಣ ಮೂಲದವರು. ಅವರ ಹಿರಿಮೆ ಮತ್ತು ಸಾಧನೆಗಳನ್ನು ನಾವು ವಿಧಾನಸಭೆಯಲ್ಲಿ ಚರ್ಚಿಸುತ್ತೇವೆ ಎಂದು ಕೆಸಿಆರ್ ತಿಳಿಸಿದ್ದಾರೆ.