ರಸ್ತೆ ಗುಂಡಿ ಖಂಡಿಸಿ ಎಎಪಿಯಿಂದ ಹತ್ತು ದಿನಗಳ ಜನಜಾಗೃತಿ, ಸಹಿ ಸಂಗ್ರಹ

1 min read
AAP saaksha tv

ರಸ್ತೆ ಗುಂಡಿ ಖಂಡಿಸಿ ಎಎಪಿಯಿಂದ ಹತ್ತು ದಿನಗಳ ಜನಜಾಗೃತಿ, ಸಹಿ ಸಂಗ್ರಹ

ರಸ್ತೆ ಗುಂಡಿಗಳಿಗೆ ಸಂಬಂಧಿಸಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಆಮ್‌ ಆದ್ಮಿ ಪಾರ್ಟಿಯು ನವೆಂಬರ್ 21ರಿಂದ ಹತ್ತು ದಿನಗಳ ಕಾಲ ಬೆಂಗಳೂರಿನಾದ್ಯಂತ ಬೃಹತ್‌ ಜನಜಾಗೃತಿ ಅಭಿಯಾನ ಹಾಗೂ ಸಹಿ ಸಂಗ್ರಹಣಾ ಚಳವಳಿ ಹಮ್ಮಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ನಗರ ಎಎಪಿ ಅಧ್ಯಕ್ಷರಾದ ಮೋಹನ್‌ ದಾಸರಿ, “ರಸ್ತೆಗುಂಡಿ ಮುಕ್ತ ಬೆಂಗಳೂರು ನಿರ್ಮಾಣವು ಆಮ್‌ ಆದ್ಮಿ ಪಾರ್ಟಿಯ ಗುರಿಯಾಗಿದೆ.

ಇದಕ್ಕಾಗಿ ನ. 21ರ ಭಾನುವಾರ ಬೆಳಗ್ಗೆ 11 ಗಂಟೆಗೆ ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣದ ಹತ್ತಿರವಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಅಭಿಯಾನವನ್ನು ಆರಂಭಿಸುತ್ತೇವೆ.

ತೆರೆದ ವಾಹನದ ಮೂಲಕ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ಭ್ರಷ್ಟಾಚಾರವನ್ನು ಬೆಂಗಳೂರಿನ ಮೂಲೆಮೂಲೆಗೆ ತಲುಪಿಸುತ್ತೇವೆ.

ಹತ್ತು ದಿನಗಳಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಜನಜಾಗೃತಿ ಮಾಡಿ, ಲಕ್ಷಾಂತರ ಬೆಂಗಳೂರಿಗರ ಸಹಿ ಸಂಗ್ರಹ ಮಾಡುತ್ತೇವೆ” ಎಂದು ತಿಳಿಸಿದರು.

ವಾಹನಗಳ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ರಸ್ತೆಯ ಗುಣಮಟ್ಟವನ್ನು ನಿರ್ಧರಿಸಬೇಕು. ಆದರೆ ಇಲಾಖೆಗಳು ಈ ನಿಯಮವನ್ನು ಅನುಸರಿಸುತ್ತಿಲ್ಲ.

AAP saaksha tv

ರಸ್ತೆಯ ಎಲ್ಲ ಪದರಗಳನ್ನು ಗುಣಮಟ್ಟದ ಸಾಮಗ್ರಿ ಬಳಸಿ ನಿರ್ಮಿಸಬೇಕು. ಆದರೆ ಗುಣಮಟ್ಟದ ಸಾಮಗ್ರಿಗೆ ಖರ್ಚಾಗಬೇಕಾದ ಹಣವನ್ನು ಗುತ್ತಿಗೆದಾರರು ಲಪಟಾಯಿಸುತ್ತಿದ್ದಾರೆ.

ಅದರಲ್ಲಿ ಎಂಜಿನಿಯರ್‌ಗಳು, ಕಾರ್ಪೊರೇಟರ್‌ ಹಾಗೂ ಶಾಸಕರಿಗೆ ಪಾಲು ಸಿಗುತ್ತಿದೆ.

ತಮಿಳುನಾಡು ಹಾಗೂ ಆಂಧ್ರದ ರಸ್ತೆಗಳು ಕರ್ನಾಟಕದ ರಸ್ತೆಗಳಿಗಿಂತಲೂ ಚೆನ್ನಾಗಿರಲು ಕಾರಣವೇನೆಂದು ನಾವು ಯೋಚಿಸಬೇಕು.

ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಎಂದೂ ಅಲ್ಲಿ ಆಡಳಿತ ಮಾಡಿಲ್ಲದಿರುವುದೇ ಇದಕ್ಕೆ ಕಾರಣ. ಹಡ್ಸನ್‌ ಸರ್ಕಲ್‌ ಮತ್ತು ಕಾವೇರಿ ಭವನದ ನಡುವಿನ ರಸ್ತೆಯನ್ನು ಗಮನಿಸಿ.

ಕಡಿಮೆ ಭ್ರಷ್ಟಾಚಾರ ಮಾಡುವವರು ಅದನ್ನು ನಿರ್ಮಿಸಿದ್ದಾರೆ ಎಂಬ ಮಾಹಿತಿ ನಮಗಿದೆ. ಆದ್ದರಿಂದ ಅಲ್ಲಿ ಗುಂಡಿಗಳು ಕಡಿಮೆಯಿದೆ ಎಂದು ಮೋಹನ್‌ ದಾಸರಿ ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್‌ ವಿ. ಸದಂರವರು ಮಾತನಾಡಿ, “ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ 20,000 ಕೋಟಿ ರೂಪಾಯಿ ಎಲ್ಲಿ ಮತ್ತು ಹೇಗೆ ಖರ್ಚಾಗಿದೆ ಎಂಬ ವಿವರವನ್ನು ಸರ್ಕಾರ ಬಹಿರಂಗಪಡಿಸಬೇಕು.

ಆ ಹಣವನ್ನು ನುಂಗಿದವರಿಗೆ ಜೈಲು ಶಿಕ್ಷೆ ಆಗಬೇಕು. ರಸ್ತೆಯನ್ನು ಸರಿಪಡಿಸಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂಬುದು ನಮ್ಮ ಮೂರು ಬೇಡಿಕೆಗಳಾಗಿವೆ.

ರಸ್ತೆ ಗುಂಡಿಗಳಿಗೆ ಸಂಬಂಧಿಸಿ ನಾವು ಈ ಹಿಂದೆ ಮಾಡಿದ್ದ ಪ್ರತಿಭಟನೆಗಳು, ರಸ್ತೆಗುಂಡಿ ಹಬ್ಬ ಎಂಬ ವಿನೂತನ ಅಭಿಯಾನ, ಸೋಶಿಯಲ್‌ ಮೀಡಿಯಾ ಚಳವಳಿಗೆ ಉತ್ತಮ ಜನಬೆಂಬಲ ವ್ಯಕ್ತವಾಗಿದೆ.

ಗುಂಡಿಗಳಿಗೆ ಕಾರಣರಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ 70ಕ್ಕೂ ಹೆಚ್ಚು ದೂರುಗಳನ್ನು ಪೊಲೀಸ್‌ ಠಾಣೆಯಲ್ಲಿ ದಾಖಲಿಸಿದ್ದೇವೆ, ಈ ಚಳವಳಿಗೆ ಕೂಡ ಹೆಚ್ಚಿನ ಬೆಂಬಲ ಸಿಗುವ ವಿಶ್ವಾಸವಿದೆ” ಎಂದು ಹೇಳಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd