500 ವರ್ಷಗಳ ಪ್ರತಿಜ್ಞೆಯನ್ನು ನೆರವೇರಿಸಿಕೊಂಡ ಸೂರ್ಯವಂಶಿ ಕ್ಷತ್ರಿಯರ 105 ಗ್ರಾಮಗಳಲ್ಲಿ ಈಗ ಎಲ್ಲೆಲ್ಲೂ ಸಂಭ್ರಮ ಸಡಗರದ ವಾತಾವರಣ:

500 ವರ್ಷಗಳ ಪ್ರತಿಜ್ಞೆಯನ್ನು ನೆರವೇರಿಸಿಕೊಂಡ ಸೂರ್ಯವಂಶಿ ಕ್ಷತ್ರಿಯರ 105 ಗ್ರಾಮಗಳಲ್ಲಿ ಈಗ ಎಲ್ಲೆಲ್ಲೂ ಸಂಭ್ರಮ ಸಡಗರದ ವಾತಾವರಣ:


ಅಯೋಧ್ಯೆಯ ಸುತ್ತಮುತ್ತಲಿನ ಸುಮಾರು 105 ಹಳ್ಳಿಗಳಲ್ಲಿ ಈಗ ಹಬ್ಬದ ವಾತಾವರಣ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಸಂತಸದ ಜೊತೆಗೆ ಇಲ್ಲಿಯ ಜನರು 500 ವರ್ಷಗಳ ನಂತರ ತಲೆಗೆ ಸಾಂಪ್ರದಾಯಿಕ ಪೇಟ ಮತ್ತು ಚರ್ಮದ ಶೂ ಗಳನ್ನು ಧರಿಸಲಿದ್ದಾರೆ.

ಅಯೋಧ್ಯೆಯ ಬಸ್ತಿ ಗ್ರಾಮಗಳಲ್ಲಿ ವಾಸಿಸುವವರು ಸೇರಿದಂತೆ ಸುತ್ತಮುತ್ತಲಿನ ಸುಮಾರು 105 ಹಳ್ಳಿಗಳಲ್ಲಿ ವಾಸಿಸುವ ಸೂರ್ಯವಂಶಿ ಕ್ಷತ್ರಿಯ ಕುಲಕ್ಕೆ ಸೇರಿದ ಪುರುಷರು ಈಗ ಪೇಟ ಮತ್ತು ಚರ್ಮದ ಬೂಟುಗಳನ್ನು ಧರಿಸಲಿದ್ದಾರೆ. ಅವರ ಪೂರ್ವಜರು 500 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗದೆ ತಲೆಗೆ ಪೇಟ, ಛತ್ರಿ ಬಳಸುವುದಿಲ್ಲ, ಚರ್ಮದ ಶೂ ಗಳನ್ನು ಧರಿಸುವುದಿಲ್ಲ ಎಂಬ ಪ್ರತಿಜ್ಞೆಯನ್ನು ಮಾಡಿದ್ದರು.

ಸೂರ್ಯವಂಶಿ ಕ್ಷತ್ರಿಯ ಕುಲದ ಜನರು ತಮ್ಮನ್ನು ರಾಮನ ವಂಶಸ್ಥರೆಂದೇ ಪರಿಗಣಿಸುತ್ತಾರೆ. ಈ ಧೈರ್ಯಶಾಲಿ ಪುರುಷರು 16 ನೇ ಶತಮಾನದಲ್ಲಿ ಪ್ರಬಲ ಮೊಘಲರ ವಿರುದ್ಧ ದೇವಾಲಯದ ಉಳಿವಿಗಾಗಿ ಹೋರಾಡಿದ್ದರು. ಆದರೆ ಅಂತಿಮವಾಗಿ ಹೋರಾಟದಲ್ಲಿ ಮೊಘಲರು ಜಯ ಗಳಿಸಿದರು. ಅಂದು ದೇವಾಲಯ ನಿರ್ಮಾಣವಾಗುವವರೆಗೆ ತಲೆಗೆ ಪೇಟ, ಛತ್ರಿ ಬಳಸುವುದಿಲ್ಲ ಮತ್ತು ಚರ್ಮದ ಶೂ ಗಳನ್ನು ಧರಿಸುವುದಿಲ್ಲ ಎಂದು ಸೂರ್ಯವಂಶಿ ಕ್ಷತ್ರಿಯ ವಂಶಸ್ಥರು ಪ್ರತಿಜ್ಞೆ ಮಾಡಿದ್ದರು. ಪೂರ್ವಜರ ಪ್ರತಿಜ್ಞೆಗೆ ಭಂಗವಾಗದಂತೆ ನಂತರದ ಪೀಳಿಗೆ ಅದನ್ನು ‌ಇಂದಿಗೂ ಅನುಸರಿಸಿಕೊಂಡ ಬಂದಿದೆ. ಇದೀಗ ಇವರ ಪ್ರತಿಜ್ಞೆ ನೆರವೇರುವ ಸಂದರ್ಭ ಬಂದಿದ್ದು, ಸಂಭ್ರಮದ ವಾತಾವರಣ ಹಳ್ಳಿಯ ಎಲ್ಲೆಡೆಯೂ ಮನೆ ಮಾಡಿದೆ.

ಭಾರತದ ಸುಪ್ರೀಂ ಕೋರ್ಟ್‌ನ ತೀರ್ಪು ಇವರ ಈ ಸಂಭ್ರಮಕ್ಕೆ ಕಾರಣವಾಗಿದ್ದು, ಐತಿಹಾಸಿಕ ತೀರ್ಪಿನ ನಂತರ ಹಳ್ಳಿಗಳಲ್ಲಿ ಕ್ಷತ್ರಿಯ ವಂಶಸ್ಥ ಪುರುಷರಿಗೆ ಪೇಟವನ್ನು ವಿತರಿಸಲು ಸಭೆಗಳನ್ನು ಆಯೋಜಿಸಲಾಗುತ್ತಿದೆ. ಈಗ ಅಯೋದ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ಇವರ 500 ವರ್ಷಗಳ ಪ್ರತಿಜ್ಞೆಯನ್ನು ನೆರವೇರಿಸಿದೆ.

ಅಲಹಾಬಾದ್ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಡಿ. ಗಜ್ಸಿಂಗ್ ಅವರು ಹೇಳುವಂತೆ ಹೀಗೊಂದು ಶಪಥ ಕೈಗೊಂಡ ಕ್ಷತ್ರಿಯ ಕುಲದ ಪುರುಷರು ಪೇಟ ಮತ್ತು ಬೂಟುಗಳ ಬಳಕೆಯನ್ನು ತ್ಯಜಿಸಿದ್ದರು. ಈ ಗ್ರಾಮಗಳಲ್ಲಿ ಸುಮಾರು ಒಂದು ಲಕ್ಷ ಜನ ಸೂರ್ಯವಂಶಿ ಕ್ಷತ್ರಿಯ ಕುಲದವರು ವಾಸಿಸುತ್ತಿದ್ದು, ಈಗಾಗಲೇ ಸುಮಾರು 400 ಪೇಟಗಳನ್ನು ವಿತರಿಸಲಾಗಿದೆ ಮತ್ತು ವಿತರಣೆ ಮುಂದುವರಿದಿದೆ. ‌

ಸಂಪ್ರದಾಯಿ ಪುರುಷಶಾಹಿಗಳು ಮದುವೆ, ಸಮಾರಂಭ ಸೇರಿದಂತೆ ಯಾವ ಸಂದರ್ಭದಲ್ಲಿಯೂ ಶಿರಸ್ತ್ರಾಣ, ಪೇಟವನ್ನು ಧರಿಸಿಲ್ಲ. ಈ ಪದ್ಧತಿ 500 ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಈ ಘಟನೆಯು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿದ್ದರೂ, ಉತ್ತರಪ್ರದೇಶದಲ್ಲಿ ಶತ ಶತಮಾನಗಳಿಂದ ಅಯೋಧ್ಯೆ, ರಾಮ ಮತ್ತು ರಾಮ ಮಂದಿರ ಜಾತಿ ವೈವಿಧ್ಯತೆಗಳ ಬದುಕನ್ನು ಹೇಗೆ ಭಾವನಾತ್ಮಕವಾಗಿ ಬೆಸೆದಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಸೂರ್ಯವಂಶಿ ಕುಲಕ್ಕೆ ಐದು ಶತಮಾನಗಳ ನಂತರ ಮಂದಿರ ನಿರ್ಮಾಣ ಜೀವನದಲ್ಲಿ ಸಂತೋಷ ಮತ್ತು ರೋಮಾಂಚನ ಕ್ಷಣವನ್ನು ಮರಳಿ ತಂದಿದೆ.

ಸುಪ್ರೀಂ ಕೋರ್ಟ್ ತೀರ್ಪು ಮತ್ತು ಅಯೋದ್ಯೆಯಲ್ಲಿ ಶ್ರೀರಾಮಚಂದ್ರ ಪ್ರಭುವಿನ ದೇಗುಲ ನಿರ್ಮಾಣ ಅಕ್ಷರಶಃ ಸೂರ್ಯವಂಶ ಕ್ಷತ್ರಿಯ ಕುಲಕ್ಕೆ ಹರ್ಷದ ತಿಲಕವನ್ನಿಟ್ಟಿದೆ ಮತ್ತು ಅವರ ಶತಶತಮಾನಗಳ ಸೂತಕ ಕಳೆದು ಸಂತೋಷವನ್ನು ಪುನರ್ ಸ್ಥಾಪಿಸಿದೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This