ಗಾಲ್ವಾನ್ ನಲ್ಲಿ ಭಾರತೀಯ ಯೋಧರ ಮೇಲೆ ನಡೆದ ಹಲ್ಲೆ ಪೂರ್ವಯೋಜಿತ
ಹೊಸದಿಲ್ಲಿ, ಜೂನ್ 19: ಇದೀಗ ಗಾಲ್ವಾನ್ ನಲ್ಲಿ ಚೀನಾದ ಸೈನಿಕರು ಭಾರತೀಯ ಯೋಧರ ಮೇಲೆ ನಡೆಸಿದ ಹಲ್ಲೆ ಪೂರ್ವಯೋಜಿತ ಎನ್ನುವುದಕ್ಕೆ ಬಲವಾದ ಸಾಕ್ಷಿ ದೊರಕಿದೆ.
ಭಾರತೀಯ ಯೋಧರನ್ನು ಕಬ್ಬಿಣದ ಸರಳುಗಳಿಂದ, ದೊಣ್ಣೆಗಳಿಂದ ಬರ್ಬರವಾಗಿ ಹಲ್ಲೆಮಾಡಿ ಚಿತ್ರ ಹಿಂಸೆಯಿಂದ ಹತ್ಯೆ ಮಾಡಿರುವ ಚೀನಾ ಸೈನಿಕರು ಕಬ್ಬಿಣದ ಸರಳುಗಳಿಗೆ ಮೊಳೆಗಳನ್ನು ವೆಲ್ಡ್ ಮಾಡಿ ತಂದಿದ್ದರು ಎಂಬುದಕ್ಕೆ ಇದೀಗ ಪುರಾವೆಗಳು ದೊರೆತಿವೆ.
ಗಾಲ್ವಾನ್ ನಲ್ಲಿ ಚೀನಾದ ಸೈನಿಕರು ಭಾರತೀಯ ಸೈನಿಕರ ಹತ್ಯೆಗೆ ಬಳಸಿದ್ದ ಮೊಳೆಯುಕ್ತ ಕಬ್ಬಿಣದ ಸರಳುಗಳ ಚಿತ್ರವನ್ನು ಅಂಗ್ಲ ಪತ್ರಿಕೆಯು ಪ್ರಕಟಿಸಿದ್ದು, ಘಟನೆಯ ಬಗ್ಗೆ ಖಚಿತ ಮಾಹಿತಿ ಬಲ್ಲ ಭಾರತೀಯ ಸೇನಾಧಿಕಾರಿ ಈ ಚಿತ್ರವನ್ನು ಒದಗಿಸಿದ್ದಾರೆ ಎಂದು ವರದಿ ಮಾಡಿದೆ.
ಗಡಿಯಲ್ಲಿ ಮತ್ತಷ್ಟು ಚೀನಿ ಸೈನಿಕರ ಜಮಾವಣೆ
ಇತ್ತೀಚಿನ ಉಪಗ್ರಹ ಚಿತ್ರಗಳ ಆಧಾರದಲ್ಲಿ ಅಂಗ್ಲ ಪ್ರತಿಕೆಯೊಂದು ವರದಿ ಪ್ರಕಟಿಸಿದ್ದು ಚೀನಾ, ಗಡಿಯಲ್ಲಿ ಸೈನಿಕರನ್ನು ಮತ್ತಷ್ಟು ಜಮಾವಣೆಗೊಳಿಸಿದೆ ಮತ್ತು ನಿರ್ಮಾಣ ಸಾಮಾಗ್ರಿಗಳನ್ನು ಶೇಖರಿಸಿದೆ ಎಂದು ಹೇಳಿದೆ. ಅಷ್ಟೇ ಅಲ್ಲ ದೌಲತ್ ಬೇಗ್ ಓಲ್ಡೀ ಬಳಿಯ ಬೆಟ್ಟಗಳ ತುದಿಯ ತನಕ ಚೀನಿ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ವರದಿ ಪ್ರಕಟಿಸಲಾಗಿದೆ. ಉಪಗ್ರಹ ಚಿತ್ರ ವಿಶ್ಲೇಷಣೆ ತಜ್ಞ, ನಿವೃತ್ತ ಕರ್ನಲ್ ವಿನಾಯಕ್ ಭಟ್ ಅವರು ಚೀನಾದ ಸೈನಿಕರು 14 ಗಸ್ತು ಪಾಯಿಂಟ್ ಬಳಿ ಆಗಾಧ ಪ್ರಮಾಣದಲ್ಲಿ ಸೇರಿರುವುದು ಮತ್ತು ಚೀನಾ ಸೇನಾ ವಾಹನಗಳ ಓಡಾಟ ಹೆಚ್ಚಿರುವುದು ಉಪಗ್ರಹ ಚಿತ್ರಗಳಿಂದ ತಿಳಿದು ಬಂದಿದೆ ಎಂದು ಹೇಳಿದ್ದಾರೆ. ಚೀನಾ ಗಾಲ್ವಾನ್ ನದಿಯ ಹರಿವಿಗೆ ತಡೆಯೊಡ್ಡುವ ಪ್ರಯತ್ನದಲ್ಲಿ ನಿರತವಾಗಿದೆ ಎಂದು ಇನ್ನೊಂದು ವರದಿ ತಿಳಿಸಿದೆ.