ದಾವಣಗೆರೆ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದ್ದ ಕೋಮುಗಲಭೆ ಪ್ರಕರಣ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಕೂಡ ಅಂತಹ ಘಟನೆ ನಡೆದಿದೆ. ಸದ್ಯ ಅಲ್ಲಿ ಪರಿಸ್ಥಿತಿ ಆತಂಕದಿಂದ ಕೂಡಿದೆ.
ನಗರಾದಾದ್ಯಂತ ವಾತಾವರಣ ಭಯಭೀತವಾಗಿದ್ದು, ಕಲ್ಲು ತೂರಾಟ ನಡೆದ ಇಮಾಂನಗರದಲ್ಲಿ ರಸ್ತೆಯುದ್ದಕ್ಕು ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ದಾವಣಗೆರೆ ಎಸ್ಪಿ ಉಮಾ ಅವರು, ಪರಿಸ್ಥಿತಿ ಹತೋಟಿಗೆ ತರಲು ಮುಂದಾಗಿದ್ದಾರೆ.
ಬೆಳಿಗ್ಗೆ ಕೂಡ ಇಮಾಮ್ ನಗರದ ಜನನಿಬಿಡ ರಸ್ತೆಗಳು ಖಾಲಿಖಾಲಿಯಾಗಿದ್ದು ಬಿಕೊ ಎನ್ನುತ್ತಿವೆ. ಇಲ್ಲಿರುವ ಮಸೀದಿ ಹತ್ತಿರ 10ಕ್ಕೂ ಅಧಿಕ ಪೊಲೀಸ್ ವಾಹನಗಳನ್ನು ನಿಲ್ಲಿಸಿ ಬಿಗಿ ಭದ್ರತೆ ಒದಗಿಸಲಾಗಿದೆ. ಗುರುವಾರ ರಾತ್ರಿ ಕಿಡಿಗೇಡಿಗಳು ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆಸಿದ್ದಾರೆ.
ಅರಳಿಮರ ಸರ್ಕಲ್ ಬಳಿ ಮೊದಲು ಕಲ್ಲು ತೂರಾಟ ಶುರುವಾಗಿದ್ದು, ಬಳಿಕ ಕೆ.ಆರ್ ರಸ್ತೆ, ಹಂಸಬಾವಿ ಸರ್ಕಲ್, ಕೆಆರ್ ಮಾರ್ಕೇಟ್ ಸೇರಿದಂತೆ ಬಂಬೂ ಬಜಾರ್ ರಸ್ತೆ, ಮಟ್ಟಿಕಲ್ಲು ಪ್ರದೇಶದಲ್ಲಿ ಕೂಡ ಕಲ್ಲು ತೂರಾಟ ನಡೆಸಲಾಗಿದೆ. ಪೊಲೀಸರ ನಿಯಂತ್ರಣಕ್ಕೂ ಬಗ್ಗದ ದುಷ್ಕರ್ಮಿಗಳು ಪೊಲೀಸರ ಮೇಲೆಯೂ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ, ಹಿಂದೂಗಳಿದ್ದ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪುಂಡರ ಕಲ್ಲು ತೂರಾಟಕ್ಕೆ ಮಟ್ಟಿಕಲ್ಲು ನಿವಾಸಿಗಳು ದೊಣ್ಣೆ ಹಿಡಿದು ಓಡಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.
60 ರಿಂದ 70 ಯುವಕರ ಗುಂಪು ಮಟ್ಟಿಕಲ್ಲು, ಅನೆಕೊಂಡದ ಹಲವು ಕಡೆಗಳಲ್ಲಿ ಕಲ್ಲು ತೂರಾಟ ನಡೆಸಿದ್ದು, ಜೊತೆಗೆ ಮನೆ ಮುಂಭಾಗದಲ್ಲಿ ಇರುವ ವಾಹನಗಳಿಗೆ ಹಾನಿ ಮಾಡಿದ್ದಾರೆ. ಹೀಗಾಗಿ ಆರೋಪಿಗಳಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಜನರು ಆಗ್ರಹಿಸಿದ್ದಾರೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಎರಡು ಕಡೆಯಿಂದ 20ಕ್ಕೂ ಹೆಚ್ಚು ಜನರನ್ನು ಸೆರೆಹಿಡಿದಿದ್ದಾರೆ.