ನಿಮಗೆ ಅರಿವಿಲ್ಲದ ಬಜಾಜ್ ಚೇತಕ್ ಎನ್ನುವ ಭಾರತೀಯ ಸಂಜಾತ ದ್ವಿಚಕ್ರ ವಾಹನದ ವೈಭವದ ದಿನಗಳ ಯಶೋಗಾಥೆ

ನಿಮಗೆ ಅರಿವಿಲ್ಲದ ಬಜಾಜ್ ಚೇತಕ್ ಎನ್ನುವ ಭಾರತೀಯ ಸಂಜಾತ ದ್ವಿಚಕ್ರ ವಾಹನದ ವೈಭವದ ದಿನಗಳ ಯಶೋಗಾಥೆ:

ಬಜಾಜ್ ಚೇತಕ್ – ಎಂಭತ್ತು ತೊಂಭತ್ತರ ದಶಕದ ಜನಪ್ರಿಯ ದ್ವಿಚಕ್ರ ವಾಹಕ ಎಂಬ ಹೆಗ್ಗಳಿಕೆ ಪಡೆದಿದ್ದ ಸ್ಕೂಟರ್ ಬ್ರಾಂಡ್. ಬಜಾಜ್ ಚೇತಕ್ ಕೇವಲ ವಾಹನವಾಗಿರಲಿಲ್ಲ. ಇದು ಆ ಕಾಲದ ಮಿಡ್ಲ್ ಕ್ಲಾಸ್ ಭಾರತೀಯನ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿ ಹೋಗಿತ್ತು. ಬಜಾಜ್ ಚೇತಕ್ ತನ್ನ ವಿಶಿಷ್ಟ ಹಾಗೂ ಆಕರ್ಷಕವಾದ ಆಕಾರದಿಂದಾಗಿ ಚಲಾಯಿಸಲು ಬಹಳವೇ ಆರಾಮವಾಗಿದ್ದ ಗಾಡಿ.

ಮದುವೆ ನಿಶ್ಚಯವಾಗುತ್ತಿದ್ದಾಗ ಗಂಡಿನ ಕಡೆಯವರ ಬೇಡಿಕೆಗಳಲ್ಲಿ ಚೇತಕ್ ನ ಆಯ್ಕೆ ಇದ್ದೇ ಇರುತ್ತಿತ್ತು. ಎಷ್ಟೋ ಬಾರಿ ಚೇತಕ್ ಬಾರದೆ ಮದುವೆಗಳೇ ಮುಂದಕ್ಕೆ ಹೋಗುತ್ತಿದ್ದ ಪರಿಣಾಮ ಈ ಬಜಾಜ್ ಚೇತಕ್ ಅನೇಕ ಮದುವೆಗಳ ಮುಹೂರ್ತವನ್ನ ಹಿಮ್ಮೆಟ್ಟುವ ಗಾಡಿ ಎಂಬ ಮಾತು ಜನಜನಿತವಾಗಿತ್ತು. ಅಂದಿನ ಭಾರತೀಯ ಜನಜೀವನದ ಒಂದು ಸೊಗಸೇ ಆಗಿ ಹೋಗಿದ್ದ ಬಜಾಜ್ ಚೇತಕ್ ನ ಬಗ್ಗೆ ಇರುವ ಒಂದಷ್ಟು ಸ್ವಾರಸ್ಯಕರ ಮಾಹಿತಿಗಳನ್ನ ತಿಳಿಯೋಣ.

ಬಜಾಜ್ ಚೇತಕ್ ಬಜಾಜ್ ಆಟೋ ಕಂಪನಿಯಿಂದ 1972 ರಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಭಾರತದ ಮೊದಲ ದ್ವಿಚಕ್ರ ವಾಹನ. ಮಹಾರಾಣಾ ಪ್ರತಾಪನ ಯುದ್ಧಾಶ್ವವಾಗಿದ್ದ ಚೇತಕ್ ಎಂಬ ಹೆಸರಿನ ಕುದುರೆಯ ಹೆಸರನ್ನೇ ಈ ಗಾಡಿಗೂ ಸಹ ಇಡಲಾಯ್ತು. ಆರಂಭದಲ್ಲಿ ಚೇತಕ್ 150 CC ಯ, ಗರಿಷ್ಠ 90 ಕಿಮೀ ವೇಗದ ಡಬಲ್ ಸ್ಟ್ರೋಕ್ ಉಳ್ಳ ವಿಸ್ತಾರವಾದ ವಾಹನವಾಗಿತ್ತು. 1956 ರ ವಿಶ್ವವಿಖ್ಯಾತ ಇಟಾಲಿಯನ್ ಬ್ರಾಂಡ್ ಆಗಿದ್ದ ವೆಸ್ಪಾ ಸ್ಪ್ರಿಂಟ್ (Vespa Sprint) ನ ಆಕಾರದಿಂದ ಪ್ರಭಾವಿತಗೊಂಡ ಬಜಾಜ್, ಚೇತಕ್ ಗಾಡಿಯನ್ನು ಅಭಿವೃದ್ದಿ ಪಡಿಸಿತು.

ತನ್ನ ವಿಸ್ತಾರವಾದ ಗಾತ್ರದಿಂದಾಗಿ ಬಜಾಜ್ ಚೇತಕ್ ಆಗಿನ ಲಕ್ಷಾಂತರ ಭಾರತೀಯರ ಕೌಟುಂಬಿಕ ಸಾರಿಗೆಯಾಗಿದ್ದು ‘ನಮ್ಮ ಬಜಾಜ್’ ಎಂದೇ ಜನಪ್ರಿಯವಾಗಿತ್ತು. ಎಪ್ಪತ್ತರ ದಶಕದಲ್ಲೇ ಬಜಾಜ್ ಚೇತಕ್ ಭಾರತದ ನಂಬರ್ ಒನ್ ಸ್ಕೂಟರ್ ಬ್ರಾಂಡ್ ಆಗಿದ್ದು. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗ್ತಿತ್ತು. ಇದರ ಜನಪ್ರಿಯತೆ ಯಾವ ಮಟ್ಟಕ್ಕೆ ಇತ್ತೆಂದರೆ ಪ್ರತೀ ವರ್ಷ ಇದರ ಮಾರಾಟದ ಸರಾಸರಿ ಪ್ರಮಾಣ ಹೆಚ್ಚಾಗುತ್ತಲೇ ಇತ್ತು.. ಒಂದು ಸಮಯದಲ್ಲಿ ಚೇತಕ್ ನ ಹೊಸ ಮಾಡೆಲ್ ಗಾಗಿ ಐದಾರು ವರ್ಷ ಕಾಯಬೇಕಾದ ಅನಿವಾರ್ಯತೆಯೂ ಇತ್ತು ! ಸೆಕೆಂಡ್ ಹ್ಯಾಂಡ್ ಚೇತಕ್ ಗಳೂ ಸಹ ದೊರೆಯುವುದು ದುರ್ಭರವಾಗಿದ್ದು. ಒಂದು ವೇಳೆ ಸಿಕ್ಕರೂ ಅವುಗಳೂ ಸಹ ದುಬಾರಿ ಬೆಲೆಯಲ್ಲೆ ಬಿಕರಿಯಾಗುತ್ತಿದ್ದವು.

ಪ್ರತೀ ಮನೆಯ ಐಷಾರಾಮಿತನದ ಸಂಕೇತದಂತೆ ಬಜಾಜ್ ಚೇತಕ್ ಗುರುತಿಸಿಕೊಡಿತ್ತು. ಪ್ರತಿ ಲೀಟರಿಗೆ 60 ಕಿಮೀ ಮೈಲೇಜ್ ಕೊಡುತ್ತಿದ್ದ ಚೇತಕ್ ಆ ಕಾಲದ ಆರ್ಥಿಕ ಸ್ನೇಹಿ ಹಾಗೂ ಕೌಟುಂಬಿಕ ಸ್ನೇಹೀ ದ್ವಿಚಕ್ರ ವಾಹನ ಎಂಬ ಹೆಗ್ಗಳಿಕೆ ಪಡೆದಿದ್ದ ವಾಹನವಾಗಿತ್ತು. 1980 ರಲ್ಲಿ ವೆಸ್ಪಾದ LV 150 ರ ಮಾದರಿಯಲ್ಲೇ ಅದರ ರಚನೆಯ ಲೈಸೆನ್ಸ್ ಪಡೆದ ಬಜಾಜ್ ಅದೇ ಮಾದರಿಯಲ್ಲಿ ಚೇತಕ್ ಅನ್ನು ತುಸು ಬದಲಾವಣೆಗಳ ಮೂಲಕ ಹೊರತಂದಿತು. 90ರ ದಶಕದ ಮಧ್ಯಭಾಗದವರೆಗೂ ಈ ಮಾಡೆಲ್ ಭಾರತೀಯ ಮಾರುಕಟ್ಟೆಯನ್ನ ಬಿಗಿದಪ್ಪಿಕೊಂಡು ತನ್ನ ಕ್ರೇಜ್ ಹಾಗೇ ಉಳಿಸಿಕೊಂಡಿತು.

ತೊಂಭತ್ತರ ವೇಳೆಗಾಗಲೇ ಕೈನೆಟಿಕ್ ಹೋಂಡಾ ಬಜಾಜ್ ಚೇತಕ್ ಗೆ ಪ್ರತಿಸ್ಪರ್ಧಿ ಸ್ಕೂಟರ್ ಆಗಿ ಮಾರುಕಟ್ಟೆಗೆ ದೌಡಾಯಿಸಿತು. ಹೋಂಡಾದ ಬೈಕ್ ಗಳೂ ಸಹ ನವೀಕರಿಸಿದ ಹೊಸ ಮಾದರಿಯಲ್ಲಿ ದಾಂಗುಡಿ ಇಟ್ಟವು. ಇವುಗಳ ಸ್ಟೈಲ್ ಹಾಗೂ ಕ್ರೇಜ್ ನಿಂದಾಗಿ ನಿಧಾನವಾಗಿ ಚೇತಕ್ ಮಂಕಾಗುತ್ತಾ ಬಂತು. 2002ರಲ್ಲಿ ನಾಲ್ಕು ಸ್ಟ್ರೋಕ್ ಉಳ್ಳ ಚೇತಕ್ ಮಾರುಕಟ್ಟೆಗೆ ಬಂತು. ಆ ಹೊತ್ತಿಗೆ ಹೋಂಡಾ ಆ್ಯಕ್ಟಿವಾ ಗೇರ್ ಲೆಸ್ ಗಾಡಿಗಳಲ್ಲಿ ಮುಂಛೂಣಿಯಲ್ಲಿತ್ತು. ಚೇತಕ್ ಜನರ ಆಸಕ್ತಿಯಿಂದ ಅದಾಗಲೇ ದೂರ ಉಳಿದಿತ್ತು. ಆಧುನಿಕ ಬೈಕ್ ಗಳ ಸ್ಪರ್ಧೆಯಲ್ಲಿ ಚೇತಕ್ ಸೋತು ಹೋಗಿತ್ತು.

ಅಂತಿಮವಾಗಿ 2005 ರಲ್ಲಿ ಚೇತಕ್ ತನ್ನ 33 ವರ್ಷಗಳ ಸುದೀರ್ಘ ಪಯಣ ಮುಗಿಸಿತು. 2005 ರಲ್ಲಿ ಚೇತಕ್ ನ ತಯಾರಿಕೆ ನಿಂತಿತು. ಈ ಸುದ್ದಿ ಘೋಷಿತವಾದಾಗ ಚೇತಕ್ ನ ಸುದೀರ್ಘ ಕಾಲದ ಬಳಕೆದಾರರಿಗೆ ನಿರಾಸೆಯುಂಟಾಯ್ತು. 20-30 ವರ್ಷಗಳಿಂದ ಚೇತಕ್ ಬಳಸುತ್ತಿದ್ದವರು ಚೇತಕ್ ಅವರಿಗೆ ನೀಡಿದ ನಿಸ್ವಾರ್ಥ ಸೇವೆಯ ಬಗ್ಗೆ ಹೆಮ್ಮೆಯಿಂದ ತಮ್ಮ ಅನುಭವ ಹಂಚಿಕೊಂಡರು. 2009-10 ರವರೆಗೂ ಚೇತಕ್ ನ ಹಳೆಯ ಮಾಡೆಲ್ ಗಳು ರಸ್ತೆಯ ಮೇಲೆ ಆಗೀಗ ಓಡಾಡುತ್ತಿದ್ದವು. ಇತ್ತೀಚೆಗೆ ಅಂದರೆ 2018ರ ಜನವರಿಯಲ್ಲಿ ಬಜಾಜ್ ಚೇತಕ್ ನ ನೂತನ ಎಲೆಕ್ಟ್ರಿಕ್ ವಾಹನಗಳನ್ನ ಬಜಾಜ್ ಕಂಪನಿ‌ ಪ್ರದರ್ಶಿಸಿತು.

2017 ರ ಸೆಪ್ಟೆಂಬರ್ ನಲ್ಲಿ ಈ ಹೊಸ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಯು ಶುರುವಾಗಿದೆಯೆಂದೂ. ಪುನಃ ಚೇತಕ್ ನ ವೈಭವವನ್ನ ಮರುಕಳಿಸುವ ಯೋಜನೆ ನಮಗಿದೆಯೆಂದು ಬಜಾಜ್ ನ ಸದ್ಯದ ಚೇರ್ ಮನ್ ಆದ ರಾಜೀವ್ ಬಜಾಜ್ ತಿಳಿಸಿದ್ದರು. 2009 ರಲ್ಲೊಮ್ಮೆ ಬಜಾಜ್ ನ ವತಿಯಿಂದ ಹೊಸ ದ್ವಿಚಕ್ರವಾಹನ ಮಾರುಕಟ್ಟೆಗೆ ಬಂದಿತ್ತು. ಇದರ ಬಳಿಕ ಅಂದರೆ ಸರಿಯಾಗಿ ಒಂಭತ್ತು ವರ್ಷಗಳ ಬಳಿಕ ಅದೇ ಪ್ರಯತ್ನ ಶುರುವಾಗಿದೆ ಎಂದು ರಾಜೀವ್ ತಿಳಿಸಿದ್ದರು. 2019ರ ನೂತನ ತಯಾರಿಕೆಯಾದ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ 2020 ರಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡುವ ಬಗ್ಗೆ ಸುದ್ದಿಯಾಗಿತ್ತು. ಈ ಹೊಸ ಬಗೆಯ ಸ್ಕೂಟರ್ ಹಳೆಯ ಚೇತಕ್ ನಂತೇ ಜನಮಾನಸವನ್ನ ಗೆಲ್ಲುತ್ತದೆಯೇ. ಕಾದು ನೋಡಬೇಕಿದೆ

ಸಂಗ್ರಹ ಮತ್ತು ಲೇಖನ :-
-ಇಂದೂಧರ್ ಇಡೆಯರ್ ಚಿತ್ರದುರ್ಗ (ಡುಗ್ಗು)

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This