Uttarapradesha: ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಶವ ಪತ್ತೆ – ಅತ್ಯಾಚಾರದ ಆರೋಪ..
ಉತ್ತರಪ್ರದೇಶದ ಲಖಿಂಪುರದ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಶವ ಬುಧವಾರ ಸಂಜೆ ಪತ್ತೆಯಾಗಿದೆ. ಒಬ್ಬರು 7ನೇ ತರಗತಿ ಹಾಗೂ ಮತ್ತೊಬ್ಬರು 10ನೇ ತರಗತಿಯ ವಿದ್ಯಾರ್ಥಿನೀಯರು ಎಂದು ಗುರುತಿಸಲಾಗಿದೆ. ಕೆಲವು ಹುಡುಗರು ಬೈಕ್‌ನಲ್ಲಿ ಹೆಣ್ಣು ಮಕ್ಕಳನ್ನು ಅಪಹರಿಸಿ, ಅತ್ಯಾಚಾರದ ನಂತರ ಕೊಲೆ ಮಾಡಿದ್ದಾರೆ ಎಂದು ತಾಯಿ ಆರೋಪಿಸಿದ್ದಾರೆ.
ತನಿಖೆಗೆ ಬಂದ ಪೊಲೀಸರ ಮೇಲೆ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಎಸ್ಪಿ ಸಂಜೀವ್ ಸುಮನ್ ಅವರ ಜೊತೆಗೂ ಗ್ರಾಮಸ್ಥರು ವಾಗ್ವಾದ ನಡೆಸಿದ್ದಾರೆ. ಕೊನೆಗೆ ಯುಪಿ ಸರ್ಕಾರವು ಐಜಿ ಲಕ್ಷ್ಮಿ ಸಿಂಗ್ ಅವರನ್ನು ರಾತ್ರೋರಾತ್ರಿ ಲಖಿಂಪುರಕ್ಕೆ ಕಳುಹಿಸಿದೆ.
ತಮ್ಮ ಮಕ್ಕಳು ಗುಡ್ಡೆಯಲ್ಲಿ ಜಾನುವಾರುಗಳಿಗೆ ಮೇವು ತರಲು ಹೋಗಿದ್ದ ವೇಳೆ ಪಕ್ಕದ ಗ್ರಾಮದ ಮೂವರು ಯುವಕರು ಬೈಕ್ ನಲ್ಲಿ ಬಂದು ಬಾಲಕಿಯರನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ಈ ವೇಳೆ ತಾನು ಗುಡಿಸಲಿನಲ್ಲಿ ಒಳಗೆ ಸ್ನಾನ ಮಾಡುತ್ತಿದ್ದೆ. ಒಬ್ಬಾತ ಹಳದಿ ಬಣ್ಣದ ಶರ್ಟ್, ಮತ್ತೊಬ್ಬ ಬಿಳಿ ಮತ್ತು ಮತ್ತೊಬ್ಬ ನೀಲಿ ಬಣ್ಣದ ಶರ್ಟ್ ಧರಿಸಿದ್ದನು ಎಂದು ಬಾಲಕಿಯರ ತಾಯಿ ಹೇಳಿದ್ದರು.
ಗುರುವಾರ ಬೆಳಗ್ಗೆ ಘಟನೆ ನಡೆದು ಸುಮಾರು 15 ಗಂಟೆಗಳ ಬಳಿಕ ಎಸ್ಪಿ ಸಂಜೀವ್ ಸಿಂಗ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. “ಹುಡುಗಿಯರನ್ನು ಬಲವಂತವಾಗಿ ಕರೆದೊಯ್ದಿಲ್ಲ. ಆರೋಪಿಗಳು ಆಮಿಷ ಒಡ್ಡಿ ಕರೆದೊಯ್ದಿದ್ದಾರೆ. ಅತ್ಯಾಚಾರವೆಸಗಿದ್ದು, ಮದುವೆ ವಿಚಾರದಲ್ಲಿ ಹುಡುಗಿಯರು ಹಠ ಹಿಡಿದಾಗ ಕೊಲೆ ಮಾಡಿದ್ದಾರೆ ಎಂದು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ.
ತಾಯಿ ಹೇಳುತ್ತಿರುವ ಮೂವರು ಪುರುಷರು ಕೂಡ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಬಾಲಕಿಯ ಸಾವಿನ ಕಾರಣವನ್ನು ತಿಳಿಯಲು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ಆದರೆ, ಸದ್ಯಕ್ಕೆ, ಅವರ ದೇಹದಲ್ಲಿ ಯಾವುದೇ ದೈಹಿಕ ಗಾಯಗಳಿಲ್ಲದ ಕಾರಣ ನಾವು ಆತ್ಮಹತ್ಯೆಯ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಎಸ್ಪಿ ಸುಮನ್ ಹೇಳುತ್ತಾರೆ.






