ದಿ ಬಾಂಬೆ ಡೇಸ್ – ರಾಜಕೀಯ ದಂಗೆಗೆ ಕಾರಣವಾದ ಆ ದಿನಗಳ ಬಗ್ಗೆ ಬರೆಯಲಿದ್ದಾರೆ ಎಚ್.ವಿಶ್ವನಾಥ್
ಮೈಸೂರು, ಜೂನ್ 29: ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ದಿ ಬಾಂಬೆ ಡೇಸ್ ಎಂಬ ರಾಜಕೀಯ ಪುಸ್ತಕ ಬರೆಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್. ವಿಶ್ವನಾಥ್ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿ, ಮುಂಬೈನಲ್ಲಿ ಕಳೆದ ದಿನಗಳ ಬಗ್ಗೆ ಪುಸ್ತಕ ಬರೆಯುವುದಾಗಿ ತಿಳಿಸಿದ್ದಾರೆ. ರಾಜಕೀಯ ದಂಗೆಗೆ ಕಾರಣವಾದ ಆ ದಿನಗಳ ಬಗ್ಗೆ ಬರೆಯುವ ಪುಸ್ತಕಕ್ಕೆ ‘ದಿ ಬಾಂಬೆ ಡೇಸ್’ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ.
ನಾನು ಯಾವುದೇ ಪಕ್ಷದಲ್ಲಿ ಇದ್ದರೂ ಆ ಪಕ್ಷವನ್ನು ಪ್ರೀತಿಸುತ್ತೇನೆ. ಪಕ್ಷದ ನಾಯಕತ್ವದ ನಡುವಳಿಕೆಯ ವಿರುದ್ಧ ದಂಗೆ ಎದ್ದವನು ನಾನು. ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ ಕಾಲದಲ್ಲಿ ನಾವೇ ಕರೆ ತಂದ ಸಿದ್ದರಾಮಯ್ಯನ ವಿರುದ್ಧ ದಂಗೆ ಎದ್ದವನು ನಾನು. ಸಮಿಶ್ರ ಸರ್ಕಾರದ ಕುಮಾರಸ್ವಾಮಿ ವಿರುದ್ಧ ದಂಗೆ ಎದ್ದವನು ನಾನು ಎಂದು ಅವರು ಹೇಳಿದರು.
ರಾಜಕೀಯ ಎನ್ನುವುದು ಭಾವನೆ ಮತ್ತು ನಂಬಿಕೆಗಳು ಮೇಲೆ ನಿಂತಿದೆ. ಅದಕ್ಕಾಗಿ ನಾನು ಪುಸ್ತಕ ಬರೆಯಲು ಅಣಿಯಾಗುತ್ತಿದ್ದೇನೆ. 2006ರಲ್ಲಿ ಕುಮಾರಸ್ವಾಮಿ-ಯಡಿಯೂರಪ್ಪ ಮಾಡಿದ್ದು ಕ್ಷಿಪ್ರ ಕ್ರಾಂತಿಯಂತೆ. ಆದರೆ, ನಾವು ಮಾಡಿದ್ದು ಪಕ್ಷಕ್ಕೆ ದ್ರೋಹವಂತೆ. ಇದ್ಯಾವ ನ್ಯಾಯವೆಂದು ಕುಮಾರಸ್ವಾಮಿ ವಿರುದ್ಧ ವಿಶ್ವನಾಥ್ ಕಿಡಿಕಾರಿದರು.

ನಾನೊಬ್ಬ ಲೇಖಕನಾಗಿ ಇದು ನನ್ನ ಕರ್ತವ್ಯ. ಮೂರು ಭಾಷೆಯಲ್ಲಿ ಈ ಪುಸ್ತಕ ಬಿಡುಗಡೆ ಆಗಲಿದ್ದು, ಪುಸ್ತಕವನ್ನು ದೆಹಲಿಯಲ್ಲಿ ಬಿಡುಗಡೆ ಮಾಡುತ್ತೇನೆ. ಬಾಂಬೆಯಲ್ಲಿ ಏನೆಲ್ಲಾ ಆಯ್ತು? ಅದೆಲ್ಲ ಪುಸ್ತಕದಲ್ಲಿ ಬರೆಯುತ್ತಿದ್ದೇನೆ. ಒಂದು ಸರ್ಕಾರ ಹೋಗಿ ಮತ್ತೊಂದು ಸರ್ಕಾರ ಬರಲೇಬೇಕಾದಾಗ ಜನತಂತ್ರ ವ್ಯವಸ್ಥೆಯಲ್ಲಿ ಭಾವನೆ ಹಾಗೂ ನಂಬಿಕೆ ಮೇಲಿನ ತಲ್ಲಣವೇನು ಎಂಬುವುದನ್ನು ಅಕ್ಷರದ ಮೂಲಕ ಜನರಿಗೆ ತಿಳಿಸುತ್ತೇನೆ ಎಂದು ವಿಶ್ವನಾಥ್ ಹೇಳಿದರು.
2006ರಲ್ಲಿ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಬಗ್ಗೆ ರವಿ ಬೆಳಗೆರೆ ಬರೆದಿದ್ದಾರೆ. ಸುಮಾರು 70 ಪುಟಗಳ ಪುಸ್ತಕದಲ್ಲಿ ಯಾವ ಎಸ್ಟೇಟ್‌ಗೆ ಹೋಗಿದ್ದರು ಎಂದೆಲ್ಲಾ ಬರೆದಿದ್ದಾರೆ. ಈ ರೀತಿ ಬರೆಯುವುದರಿಂದ ಸರ್ಕಾರಕ್ಕೆ ಯಾವ ಸಮಸ್ಯೆಯೂ ಆಗುವುದಿಲ್ಲ. ಸರ್ಕಾರ ಗಟ್ಟಿಯಾಗಿದೆ ಎಂದು ಅವರು ಹೇಳಿದರು.







