ಮಂಡ್ಯ: ಕಾರೊಂದು ಚಾಲಕನ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಹಳ್ಳಕ್ಕೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸೇತುವೆ ಹತ್ತಿರ ನಡೆದಿದೆ. ಕೆ.ಆರ್.ಪೇಟೆ ನಿವಾಸಿಗಳಾದ ಅನಿಕೇತನ್ (30), ಪವನ್ ಶೆಟ್ಟಿ (32) ಹಾಗೂ ಚಿರಂಜೀವಿ (32) ಸಾವನ್ನಪ್ಪಿದ ದುರ್ದೈವಿಗಳು.
ಅಲ್ಲದೇ, ಘಟನೆಯಲ್ಲಿ ಸಾಗರ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಕಾರಿನಲ್ಲಿದ್ದವರು ಕೆ.ಆರ್.ಪೇಟೆಯಿಂದ ಅಕ್ಕಿಹೆಬ್ಬಾಳು ಗ್ರಾಮಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ (Accident) ಸಂಭವಿಸಿದೆ. ಈ ಕುರಿತು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.