ಭಾಲ್ಕಿ : ದೇಶದ ಅಭಿವೃದ್ಧಿ ಹಾಗೂ ಬೆಳವಣಿಯಲ್ಲಿ ಗಾಂಧಿ ಮನೆತನದ ಕೊಡುಗೆ ಅನನ್ಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನದ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿರಾ ಗಾಂಧಿ, ರಾಜೀವ ಗಾಂಧಿ ದೇಶದ ಪ್ರಧಾನಿಗಳಾಗಿ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಆ ಸ್ಥಾನದಲ್ಲಿ ಆರ್ಥಿಕ ತಜ್ಞ ಮನೋಹನ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಮಾಡಿ ದೇಶದ ಅಭಿವೃದ್ಧಿಗೆ ಸಾಥ್ ನೀಡಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೂಡ ಒಬ್ಬ ಸಹಾನಭೂತಿಯ ನಾಯಕರಾಗಿದ್ದು, ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅಂತವರ ಜನ್ಮದಿನದಂದು ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಜನ್ಮದಿನದ ನಿಮಿತ್ತ ತಾಲೂಕು ಕಾಂಗ್ರೆಸ್ ನಿಂದ ನಡೆದ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ 50 ಕ್ಕೂ ಅಧಿಕ ಕಾರ್ಯಕರ್ತರು ರಕ್ತದಾನ ಮಾಡಿದರು. ಈ ವೇಳೆ ರಕ್ತದಾನ ಮಾಡಿದ ಎಲ್ಲ ಕಾರ್ಯಕರ್ತರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಅವರು ಸರ್ಟಿಫಿಕೇಟ್ ನೀಡಿ, ಅಭಿನಂದಿಸಿದರು.